ಅಜೇಂದ್ರ ಶೆಟ್ಟಿ ಕೊಲೆ ಪ್ರಕರಣ: ಆರೋಪಿಗೆ ಏಳು ದಿನಗಳ ಕಾಲ ಪೊಲೀಸ್ ಕಸ್ಟಡಿ
ಕುಂದಾಪುರ: ಫೈನಾನ್ಸ್ ಪಾಲುದಾರ ಕೂಡಾಲ್ ನಿವಾಸಿ ಅಜೇಂದ್ರ ಶೆಟ್ಟಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಅನೂಪ್ ಶೆಟ್ಟಿಯನ್ನು ಪೊಲೀಸರು ಸೋಮವಾರ ಕುಂದಾಪುರ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಕೊಲೆ ಪ್ರಕರಣದ ಹೆಚ್ಚಿನ ತನಿಖೆಗಾಗಿ ಆರೋಪಿಯನ್ನು ಇನ್ನು ಏಳು ದಿನಗಳ ಕಾಲ ಅಂದರೆ ಅಗಸ್ಟ್ 9ರ ತನಕ ಪೊಲೀಸ್ ಕಸ್ಟಡಿಗೆ ನೀಡಿ 1ನೇ ಜೆಎಮ್‌ಎಫ್‌ಸಿ ನ್ಯಾಯಧೀಶೆ ನಾಗರತ್ನಮ್ಮ ಆದೇಶ ಹೊರಡಿಸಿದ್ದಾರೆ.ಸೋಮವಾರ ಎಸ್ಪಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ಮುಗಿದ ಬಳಿಕ ನೇರವಾಗಿ ಕುಂದಾಪುರಕ್ಕೆ ಆರೋಪಿಯನ್ನು ಕರೆತಂದ ಪೊಲೀಸರು ವೈದ್ಯಕೀಯ ತಪಾಸಣೆಗೊಳಪಡಿಸಿ ಕುಂದಾಪುರ ಸಿಪಿಐ ಗೋಪಿಕೃಷ್ಣ ಅವರ ಕಚೇರಿಗೆ ಕರೆತಂದು ಮಧ್ಯಾಹ್ನದ ಹೊತ್ತಿಗೆ ನ್ಯಾಯಾಲಯಕ್ಕೆ ಹಾಜರುಪಡಿಸಿದರು.
ಕೊಲೆ ನಡೆಸಿದ ಬಳಿಕ ಆರೋಪಿ ಅನೂಪ್ ಅಜೇಂದ್ರ ಅವರ ಕಾರಿನಲ್ಲಿ ಗೋವಾಕ್ಕೆ ಪ್ರಯಾಣ ಬೆಳೆಸಿದ್ದನು. ಕೆಲವು ತಂತ್ರಜ್ಙಾನಗಳ ಆಧಾರದಲ್ಲಿ ಆರೋಪಿ ಇರುವ ಸ್ಥಳ ಪತ್ತೆ ಹಚ್ಚಿದ ಪೊಲೀಸರು ಗೋವಾದ ಕೊಲ್ವಾ ಬೀಚ್‌ನಲ್ಲಿ ವಶಕ್ಕೆ ಪಡೆದಿದ್ದರು. ಪ್ರಕರಣದ ಕುರಿತ ಇನ್ನಷ್ಟು ತನಿಖೆಗಾಗಿ ಆರೋಪಿಯನ್ನು ಪೊಲೀಸ್ ಕಸ್ಟಡಿಗೆ ನೀಡುವಂತೆ ಸಹಾಯಕ ಸರ್ಕಾರಿ ಅಭಿಯೋಜಕಿ ವರ್ಷಾಶ್ರೀ ವಾದ ಮಂಡಿಸಿದ್ದರು. ಸದ್ಯ ಆರೋಪಿಯನ್ನು ತಮ್ಮ ಕಸ್ಟಡಿಗೆ ಪಡೆದುಕೊಂಡಿರುವ ಪೊಲೀಸರು ಇನ್ನಿತರ ಮಾಹಿತಿಯನ್ನು ಕಲೆಹಾಕಲು ಆರೋಪಿಯೊಂದಿಗೆ ಗೋವಾಗೆ ತೆರಳಿದ್ದಾರೆ ಎಂದು ತಿಳಿದುಬಂದಿದೆ.