ಅವೈಜ್ಞಾನಿಕ ಚರಂಡಿ ಅವ್ಯವಸ್ಥೆಯ ಬಗ್ಗೆ ದೂರು:ಸೂಕ್ತ ಕ್ರಮಕ್ಕೆ ಕುಂದಾಪರ ಎಸಿ ಸೂಚನೆ
ಕುಂದಾಪುರ : ರಾಷ್ಟ್ರೀಯ ಹೆದ್ದಾರಿ-66 ಚತುಷ್ಪತ ಕಾಮಗಾರಿಯ ವೇಳೆ ನಡೆಸಲಾದ ಅವೈಜಾÐನಿಕ ಚರಂಡಿ ಅವ್ಯವಸ್ಥೆಯಿಂದಾಗಿ ಹೆದ್ದಾರಿಗೆ ತಾಗಿಕೊಂಡಿರುವ ಮನೆಗಳಿಗೆ ನೀರು ನುಗ್ಗುತ್ತಿರುವ ಹಿನ್ನೆಲೆ ಸಾರ್ವಜನಿಕ ದೂರಿನ ಮೇರೆಗೆ ಕುಂದಾಪುರ ಸಹಾಯಕ ಆಯುಕ್ತ ಕೆ.ರಾಜು ಭೇಟಿ ನೀಡಿ ಸಮೀಪದ ನಿವಾಸಿಗಳಿಗೆ ತೊಂದರೆಯಾಗದಂತೆ ಕ್ರಮ ಕೈಗೊಳ್ಳಲು ಹೆದ್ದಾರಿ ಗುತ್ತಿಗೆ ಕಂಪೆನಿಯ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದ್ದಾರೆ.ಕುಂದಾಪುರದ ಸಹಾಯಕ ಆಯುಕ್ತರ ಕಚೇರಿಯಲ್ಲಿ ಕುಂದಾಪು ಹಾಗೂ ಬೈಂದೂರು ಹೆದ್ದಾರಿ ಗುತ್ತಿಗೆ ವಹಿಸಿಕೊಂಡ ಐಆರ್ಬಿ ಹಾಗೂ ನವಯುಗ ಕಂಪೆನಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಬಳಿಕ ಅವರು ನಗರದ ಹೊರ ವಲಯದ ರಾಷ್ಟ್ರೀಯ ಹೆದ್ದಾರಿಯ 66 ಕ್ಕೆ ಹೊಂದಿಕೊಂಡಿರುವ ನೀರು ಹಾದು ಹೋಗುವ ಚರಂಡಿ ಹಾಗೂ ತಗ್ಗು ಪ್ರದೇಶಗಳ ಪರಿಶೀಲನೆ ನಡೆಸಿದರು.
ಸ್ಥಳ ಪರಿಶೀಲನೆಯ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಸಹಾಯಕ ಆಯುಕ್ತ ಕೆ.ರಾಜು ಅವರು, ಮಳೆಗಾಲದ ಪೂರ್ವಭಾವಿ ಸಿದ್ದತೆಯ ಕುರಿತಂತೆ ಈಗಾಗಲೇ ಜಿಲ್ಲಾಧಿಕಾರಿಗಳು ಹಾಗೂ ಅಪರ ಜಿಲ್ಲಾಧಿಕಾರಿಗಳು ಹೆದ್ದಾರಿ ಗುತ್ತಿಗೆ ಕಂಪೆನಿಯವರೊಂದಿಗೆ ಮಾತುಕತೆ ನಡೆಸಿದ್ದಾರೆ. ಮುಂಬರುವ ಮಳೆಗಾಲದ ಅವಧಿಯಲ್ಲಿ ಹೆದ್ದಾರಿಯ ಕಾಮಗಾರಿಯಿಂದಾಗಿ ಜನರಿಗೆ ತೊಂದರೆಯಾಗಬಾರದು ಎನ್ನುವ ದಿಸೆಯಲ್ಲಿ ಬೈಂದೂರು ಭಾಗದ ಪ್ರದೇಶಗಳಿಗೆ ಭೇಟಿ ನೀಡಿ, ಆ ಭಾಗದ ಹೆದ್ದಾರಿ ಗುತ್ತಿಗೆ ವಹಿಸಿಕೊಂಡಿರುವ ಐಆರ್ಬಿ ಕಂಪೆನಿಯ ಅಧಿಕಾರಿಗಳಿಂದಿಗೆ ಮಾತುಕತೆ ನಡೆಸಿ ಸೂಕ್ತ ಮುಂಜಾಗ್ರತ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ. ಕುಂದಾಪುರ ಭಾಗದ ಪ್ರದೇಶಕ್ಕೆ ಸಂಬಂಧಿಸಿದಂತೆ ಇಂದು ಐಆರ್ಬಿ ಹಾಗೂ ನವಯುಗ ಕಂಪೆನಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ ತುರ್ತು ಕಾಮಗಾರಿ ಕೈಗೊಳ್ಳಲು ಸೂಚಿಸಲಾಗಿದೆ ಎಂದರು.
ಪುರಸಭೆ ಮುಖ್ಯಾಧಿಕಾರಿ ಗೋಪಾಲಕೃಷ್ಣ ಶೆಟ್ಟಿ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು, ಗುತ್ತಿಗೆ ಕಂಪೆನಿಯ ಅಧೀಕಾರಿಗಳು, ಕುಂದಾಪುರ ನಗರ ಠಾಣೆಯ ಪಿಎಸ್ಐ ಸದಾಶಿವ ಗವರೋಜಿ ಹಾಗೂ ಸಂಚಾರಿ ಠಾಣೆ ಪಿಎಸ್ಐ ಸುದರ್ಶನ್ ಜೊತೆಗಿದ್ದರು.