ಆಸ್ಕರ್ ಫೆರ್ನಾಂಡಿಸ್ ರಿಗೆ ಯಶಸ್ವಿ ಶಸ್ತ್ರ ಚಿಕಿತ್ಸೆ
ಮಂಗಳೂರು: ನಗರದ ಯೆನೆಪೊಯ ಆಸ್ಪತ್ರೆಯಲ್ಲಿ ಕಳೆದ ಒಂಬತ್ತು ದಿನಗಳಿಂದ ಪ್ರಜ್ಞಾಹೀನ ಸ್ಥಿತಿಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದ ಕಾಂಗ್ರೆಸ್‌ನ ಹಿರಿಯ ಮುಖಂಡ, ರಾಜ್ಯ ಸಭಾ ಸದಸ್ಯ ಆಸ್ಕರ್ ಫೆರ್ನಾಂಡಿಸ್ (80) ಅವರಿಗೆ ಮಂಗಳವಾರ ನಸುಕಿನ ಜಾವ ಯಶಸ್ವಿ ಶಸ್ತ್ರ ಚಿಕಿತ್ಸೆ ನಡೆಸಲಾಯಿತು.
ತಡರಾತ್ರಿ 12ರಿಂದ ಆರಂಭವಾದ ಶಸ್ತ್ರ ಚಿಕಿತ್ಸೆಯು ನಸುಕಿನ ಜಾವ 5.30 ರವರೆಗೂ ನಡೆಯಿತು. ಯೆನೆಪೊಯ ಆಸ್ಪತ್ರೆಯ ನ್ಯೂರಾಲಜಿಸ್ಟ್ ಡಾ.ದಿವಾಕರ್ ರಾವ್, ಎ.ಜೆ. ಆಸ್ಪತ್ರೆಯ ನ್ಯೂರಾಲಜಿಸ್ಟ್ ಡಾ.ಸುನೀಲ್ ಶೆಟ್ಟಿ ನೇತೃತ್ವದ ವೈದ್ಯರ ತಂಡ ಶಸ್ತ್ರ ಚಿಕಿತ್ಸೆಯನ್ನು ಯಶಸ್ವಿಯಾಗಿ ನೆರವೇರಿಸಿತು.
ಆಸ್ಕರ್ ಅವರ ಮೆದುಳಿನಲ್ಲಿ ರಕ್ತ ಹೆಪ್ಪುಗಟ್ಟಿದ್ದನ್ನು ಶಸ್ತ್ರ ಚಿಕಿತ್ಸೆ ನಡೆಸಿ ತೆಗೆದು ಹಾಕಲಾಯಿತು ಎಂದು ಆಪ್ತ ಮೂಲಗಳು ತಿಳಿಸಿವೆ.
ಆಸ್ಕರ್ ಅವರು ಜು.೧೯ರಂದು ಬೆಳಗ್ಗೆ ಸರಳ ಯೋಗ ಮಾಡುತ್ತಿದ್ದ ಸಂದರ್ಭ ನಿಯಂತ್ರಣ ತಪ್ಪಿ ಬಿದ್ದಿದ್ದರು. ಸಣ್ಣ ಗಾಯವಾದ್ದರಿಂದ ಆಸ್ಕರ್ ಅದನ್ನು ನಿರ್ಲಕ್ಷಿಸಿದ್ದರು. ಅದೇ ದಿನ ಡಯಾಲಿಸಿಸ್ ತಪಾಸಣೆಗೆಂದು ಆಸ್ಪತ್ರೆಗೆ ತೆರಳಿದ್ದಾರೆ. ತಲೆಗೆ ಪೆಟ್ಟಾಗಿರುವುದನ್ನು ವೈದ್ಯರು ಪತ್ತೆ ಹಚ್ಚಿ, ಐಸಿಯುಗೆ ದಾಖಲಿಸಿ ಚಿಕಿತ್ಸೆ ಮುಂದುವರಿಸಿದ್ದರು.