ಇಂಧನ ಬೆಲೆ ಏರಿಕೆ ವಿರುದ್ಧ ಅಭಯಚಂದ್ರ ಜೈನ್ರಿಂದ ಒಂಟಿಯಾಗಿ ಪ್ರತಿಭಟನೆ
ಪೆಟ್ರೋಲ್ ಮತ್ತು ಡೀಸೆಲ್, ಅಡುಗೆ ಅನಿಲ ಬೆಲೆಯೇರಿಕೆ ಖಂಡಿಸಿ ಮಾಜಿ ಸಚಿವ, ಕಾಂಗ್ರೆಸ್ ಮುಖಂಡ ಕೆ.ಅಭಯಚಂದ್ರ ಜೈನ್ ಅವರು ಮೂಡುಬಿದಿರೆಯಲ್ಲಿ ಒಂಟಿಯಾಗಿ ಪ್ರತಿಭಟನೆ ನಡೆಸಿ ಗಮನಸೆಳೆದರು.
ಇಂಧನ ತೈಲ, ಅಡುಗೆ ಅನಿಲ ಬೆಲೆಯೇರಿಕೆ ವಿರುದ್ಧ ಇಂದು ಕಾಂಗ್ರೆಸ್ ಪಕ್ಷದ ವತಿಯಿಂದ ಮೂಡುಬಿದಿರೆಯಲ್ಲಿ ಸೈಕಲ್ ಜಾಥಾ ಮೂಲಕ ಪ್ರತಿಭಟನೆ ನಡೆಸಲು ನಿರ್ಧರಿಸಲಾಗಿತ್ತು. ಆದರೆ ಮೂಡುಬಿದಿರೆ ಪೊಲೀಸರು ಇದಕ್ಕೆ ಅನುಮತಿ ನಿರಾಕರಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಅಭಯಚಂದ್ರ ಜೈನ್ ಇಂದು ಒಂಟಿಯಾಗಿ ಸೈಕಲ್ ಸವಾರಿ ಮಾಡಿ ಪ್ರತಿಭಟಿಸಿದರು.
ಇಂದು ಬೆಳಗ್ಗೆ ಒಂಟಿಯಾಗಿ ಸೈಕಲನ್ನು ಏರಿ ಮೂಡುಬಿದಿರೆ ತಾಲೂಕು ಕಚೇರಿಗೆ ತೆರಳಿದ ಅಭಯಚಂದ್ರ ಜೈನ್, ಇತ್ತೀಚಿನ ದಿನಗಳಲ್ಲಿ ದೇಶದಲ್ಲಿ ಪೆಟ್ರೋಲ್, ಡೀಸೆಲ್, ಅಡುಗೆ ಅನಿಲದ ಬೆಲೆ ಗಗನಕ್ಕೇರುತ್ತಿದೆ. ಇದರಿಂದ ದಿನ ಬಳಕೆಯ ಸಾಮಗ್ರಿಗಳ ಬೆಲೆಯಲ್ಲೂ ಏರಿಕೆಯಾಗಿದ್ದ, ಜನಸಾಮಾನ್ಯರು ತತ್ತರಿಸಿದ್ದಾರೆ. ಆದ್ದರಿಂದ ಈ ಸಮಸ್ಯೆ ಬಗ್ಗೆ ಸೂಕ್ತವಾಗಿ ಸ್ಪಂದಿಸಿ ಜನರು ಸ್ವಾಭಿಮಾನದಿಂದ ಬದುಕುವ ವಾತಾವರಣ ನಿರ್ಮಿಸಬೇಕು ಎಂದವರು ತಹಶೀಲ್ದಾರ್ ಮೂಲಕ ಪ್ರಧಾನ ಮಂತ್ರಿಗೆ ಮನವಿ ಸಲ್ಲಿಸಿದರು.
ಬಳಿಕ ಈ ಬಗ್ಗೆ ಮಾಧ್ಯಮದವರ ಜೊತೆ ಮಾತನಾಡಿದ ಅಭಯಚಂದ್ರ ಜೈನ್, ಮೂಡುಬಿದಿರೆ ಕಾಂಗ್ರೆಸ್ ವತಿಯಿಂದ ಇಂದು ಬೆಳಗ್ಗೆ ಪೆಟ್ರೋಲ್ ಡೀಸೆಲ್ ಹಾಗೂ ದಿನನಿತ್ಯ ವಸ್ತುಗಳ ಬೆಲೆ ಏರಿಕೆ ವಿರುದ್ಧ ಸೈಕಲ್ ಜಾಥಾ ನಿರ್ಧರಿಸಲಾಗಿತ್ತು. ಇದಕ್ಕೆ ನಾನು ಮೂಡುಬಿದಿರೆ ಪೊಲೀಸ್ ಠಾಣೆಯಲ್ಲಿ ಅನುಮತಿಯನ್ನು ಕೋರಿದ್ದೆ. ಆದರೆ ಅನುಮತಿ ನಿರಾಕರಿಸಿದ ಪೊಲೀಸರು, ಸೈಕಲ್ ಜಾಥಾ ಹಮ್ಮಿಕೊಂಡರೆ ನಿಮ್ಮನ್ನು ಬಂಧಿಸುವುದಾಗಿ ಎಚ್ಚರಿಸಿದರು. ಈ ಕಾರಣಕ್ಕೆ ಕಾಂಗ್ರೆಸ್ ಕಾರ್ಯಕರ್ತರಿಗೆ ಯಾವುದೇ ತೊಂದರೆಯಾಗಬಾರದೆಂದು ನಾನು ಒಬ್ಬನೇ ಸೈಕಲ್ ನಲ್ಲಿ ಬಂದು ತಹಶೀಲ್ದಾರರಿಗೆ ಮನವಿ ಸಲ್ಲಿಸಿದ್ದೇನೆ. ಪೊಲೀಸರು ಬಂಧಿಸುವುದಾದರೆ ನನ್ನನ್ನು ಬಂಧಿಸಲಿ ಎಂದು ಹೇಳಿದರು.