ಉಪ್ಪಿನಂಗಡಿ: ನದಿ ಸ್ನಾನಕ್ಕಿಳಿದ ಬಾಲಕರಿಬ್ಬರು ನೀರಿನಲ್ಲಿ ಮುಳುಗಿ ಸಾವು

ಉಪ್ಪಿನಂಗಡಿ: ಸ್ನಾನಕ್ಕೆಂದು ನೇತ್ರಾವತಿ ನದಿಗಿಳಿದ ಗದಗ ಮೂಲದ ಕಾರ್ಮಿಕ ಕುಟುಂಬದ ಬಾಲಕರಿಬ್ಬರು ನದಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ಸೋಮವಾರ ಸಂಜೆ ನಡೆದಿದೆ. ಗದಗ ಜಿಲ್ಲೆಯ ಶಿರಹಟ್ಟಿ ತಾಲೂಕಿನ ಸುಬ್ಬನಹಳ್ಳಿ ನಿವಾಸಿ ಧರ್ಮ, ಮೀನಾಕ್ಷಿ ದಂಪತಿ ಮಕ್ಕಳಾದ ನಿಂಗರಾಜು (16), ಸತೀಶ್ (14) ಮೃತಪಟ್ಟವರು.

ನಿಂಗರಾಜು ಗದಗ ಮುರಾರ್ಜಿ ದೇಸಾಯಿ ವಸತಿ ಶಾಲೆ ಹತ್ತನೇ ತರಗತಿ ವಿದ್ಯಾರ್ಥಿ. ಸತೀಶ 8 ನೇ ತರಗತಿಯಲ್ಲಿ ಕಲಿಯುತ್ತಿದ್ದ. ವಿದ್ಯಾರ್ಥಿಗಳು ಲಾಕ್‌ಡೌನ್ ಕಾರಣದಿಂದ ಉಪ್ಪಿನಂಗಡಿ ಇಳಂತಿಲದ ಕೇದಾರ ಮನೆಯ ತೋಟದ ಕೆಲಸದಲ್ಲಿದ್ದ ತನ್ನ ತಂದೆ ತಾಯಿಯ ಜೊತೆಗೂಡಲೆಂದು ಬಂದಿದ್ದರು.ಸೋಮವಾರ ಸಾಯಂಕಾಲ ಹೆತ್ತವರು ಕಾರ್ಯ ನಿಮಿತ್ತ ಪೇಟೆಗೆ ಹೋಗಿದ್ದ ಸಂದರ್ಭ ನದಿ ಆಳವಾದ ಸ್ಥಳದಲ್ಲಿ ನೀರಿಗಿಳಿದಿದ್ದರು. ಮೊದಲು ನೀರಿಗಿಳಿದಿದ್ದ ಸತೀಶ, ನಿಂಗರಾಜು ಇಬ್ಬರೂ ನೀರಿನಲ್ಲಿ ಮುಳುಗಿದ್ದನ್ನು ಕಂಡ ಜೊತೆಗಿದ್ದ ಇನ್ನೋರ್ವ ಸಹೋದರ ಸಂಬಂಧಿ ಬಸವ ಎಂಬಾತ ಭಯದಿಂದ ಮನೆಗೆ ಹಿಂತಿರುಗಿ ವಿಚಾರ ತಿಳಿಸಿದ್ದಾನೆ. ಕೂಡಲೇ ಸ್ಥಳೀಯರ ಸಹಕಾರ ಪಡೆದು ನದಿಯಲ್ಲಿ ಶೋಧ ನಡೆಸಿ ಇಬ್ಬರ ಮೃತ ದೇಹ ಮೇಲಕ್ಕೆತ್ತಲಾಯಿತು.

ವಿಖಾಯ ತಂಡದ ಸೇವೆ: ಬಾಲಕರಿಬ್ಬರು ನದಿಯಲ್ಲಿ ಮುಳುಗಿದ್ದಾರೆ ಎಂಬ ಮಾಹಿತಿ ಪಡೆದಾಕ್ಷಣ ಇಳಂತಿಲದ ವಿಖಾಯ ತಂಡದ ಸ್ವಯಂ ಸೇವಕರಾದ ಯು ಟಿ ಫಯಾಜ್, ಬಶೀರ್, ರಶೀದ್, ಸಲಾಂ, ಚೆರಿಯನಾಕ ಮತ್ತು ಸ್ಥಳೀಯರಾದ ಆಶ್ರಫ್ ಅಂಡೆತ್ತಡ್ಕ ಎಂಬುವರು ನೀರಿಗೆ ಧುಮುಕಿ ನಿಂಗರಾಜುವಿನ ದೇಹವನ್ನು ಮೇಲೆತ್ತಿದ್ದರು. ಬಳಿಕ ಸತೀಶನ ದೇಹವನ್ನೂ ಪತ್ತೆ ಹಚ್ಚಿ ಹೊರತೆಗೆಯುವಲ್ಲಿ ಯಶಸ್ವಿಯಾದರು. ಮಳೆಗಾಲದಲ್ಲಿ ಅಪಾಯ ಎದುರಿಸಲು ಹತ್ತು ಮಂದಿ ನುರಿತ ಈಜುಗಾರರನ್ನು ಒಳಗೊಂಡ ವಿಖಾಯ ತಂಡವನ್ನು ಸಿದ್ಧಪಡಿಸಲಾಗಿತ್ತು. ಈ ತಂಡ ಇಂದಿನ ಬಾಲಕರ ಶೋಧ ಕಾರ್ಯಾಚರಣೆಯಲ್ಲಿ ಪೊಲೀಸ್ ಇಲಾಖೆಗೆ ಸಹಕಾರ ನೀಡಿದೆ.

Related Posts

Leave a Reply

Your email address will not be published.