ಎಚ್ ಆರ್ ಪಿ ಹಗರಣ : ಕಂದಾಯ ನಿರೀಕ್ಷಕ ಮಂಜುನಾಥ್ ಬಂಧನ

ಸಕಲೇಶಪುರ: ಹೇಮಾವತಿ ಜಲಾಶಯ ಮುಳುಗಡೆ ಸಂತ್ರಸ್ತರ ಹೆಸರಿನಲ್ಲಿ ನಕಲಿ ದಾಖಲೆಗಳನ್ನು ಸೃಷ್ಟಿಸಿ ಭೂಮಿ ಮಂಜೂರು ಹಗರಣಕ್ಕೆ ಸಂಬಂಧಿಸಿದಂತೆ ಯಸಳೂರು ಕಂದಾಯ ನಿರೀಕ್ಷಕ ಮಂಜುನಾಥ್ ಅವರನ್ನು ಶುಕ್ರವಾರ ಪೊಲೀಸರು ಬಂಧಿಸಿದ್ದಾರೆ.

ಇಡೀ ರಾಜ್ಯದ ಗಮನ ಸೆಳೆದಿರುವ ಸಾವಿರಾರು ಕೋಟಿ ರೂಪಾಯಿ ಮೌಲ್ಯದ ಎಚ್‌ಆರ್‌ಪಿ ಭೂ ಹಗಣದಲ್ಲಿ ಪೊಲೀಸರಿಂದ ಬಂಧನಕ್ಕೆ ಒಳಗಾದವರ ಸಂಖ್ಯೆ ನಾಲ್ಕಕ್ಕೆ ಏರಿದೆ.   ಆಲೂರು ತಾಲ್ಲೂಕಿನ ಹೆಚ್‌ಆರ್‌ಪಿ  ಸಂತ್ರಸ್ತರಿಗೆ ಸಕಲೇಶಪುರ ತಾಲ್ಲೂಕಿನಲ್ಲಿ  ಭೂಮಿ ಮಂಜೂರು ಮಾಡಿಸಿ, ಅವರಿಂದ ಕಡಿಮೆ ಬೆಲೆಗೆ ತಲಾ ನಾಲ್ಕು  ಎಕರೆ  ಭೂಮಿ ಮಾರಾಟ ಮಾಡಿಸುವುದಾಗಿ ಎಸ್‌.ಕೆ. ಪ್ರದೀಪ್  20 ಲಕ್ಷ ರೂಪಾಯಿ ಹಣ ಪಡೆದು  ನಕಲಿ ಮಂಜೂರಾತಿ ಪತ್ರ ನೀಡಿ  ವಂಚಿಸಿದ್ದಾನೆ ಎಂದು ತಾಲ್ಲೂಕಿನ ಬಾಗೆ ಗ್ರಾಮದ ಶಾಂತಕುಮಾರ್ ಎಂಬುವವರು ಪೊಲೀಸರಿಗೆ ದೂರು ನೀಡಿದ್ದರು.  ಈ ಪ್ರಕರಣದಲ್ಲಿ ಪೊಲೀಸರು ಎಸ್‌.ಕೆ. ಪ್ರದೀಪ್‌, ಭರತ್‌, ಜನಾರ್ಧನ್‌  ಮೂವರನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ.  ನಕಲಿ ದಾಖಲೆಗಳಿಗೆ ಭೂಮಿ ಮಂಜೂರು ಮಾಡಲು ಆರ್‌ಐ ಮಂಜುನಾಥ್‌ ನನ್ನಿಂದ 40 ಲಕ್ಷ ರೂಪಾಯಿ  ಹಣ ಪಡೆದಿದ್ದಾನೆ ಎಂದು ನ್ಯಾಯಾಂಗ ವಶದಲ್ಲಿ ಇರುವ ಪ್ರದೀಪ ಪೊಲೀಸರ ವಿಚಾರಣೆ ಸಂದರ್ಭದಲ್ಲಿ ಹೇಳಿಕೆ ನೀಡಿದ್ದ ಎನ್ನಲಾಗಿದೆ.

ಕೆಲವು ದಿನಗಳ ಹಿಂದೆಯೇ ಪೊಲೀಸರು ಮಂಜುನಾಥ್‌ನನ್ನು  ಬಂಧಿಸಿ ವಿಚಾರಣೆ ನಡೆಸಿದ್ದರು. ಈ ಹಗರಣದ ಮುಖ್ಯ ಸೂತ್ರದಾರ ಮಂಜುನಾಥ್‌ ಬಗ್ಗೆ ಕೆಲವು ದಾಖಲೆಗಳನ್ನು ಸಂಗ್ರಹಿಸಿ  ಜಿಲ್ಲಾ ಪೊಲೀಸ್‌ ವರಿಷ್ಟಾಧಿಕಾರಿ ಶ್ರೀನಿವಾಸ್‌ಗೌಡ ಅವರ ಸೂಚನೆ ಮೇರೆಗೆ  ಬಂಧಿಸಿ ಪ್ರಕರಣ ದಾಖಲು ಮಾಡುವಲ್ಲಿ ಪಟ್ಟಣ ಪೊಲೀಸರು ಯಾಶಸ್ಸಿ ಕಾರ್ಯಾಚರಣೆ ಮಾಡಿದ್ದಾರೆ.  ಸಾವಿರಾರು ಕೋಟಿ ರೂಪಾಯಿ ಮೌಲ್ಯದ   ಎಚ್‌ಆರ್‌ಪಿ ಭೂ ಹಗರಣದಲ್ಲಿ ಪೊಲೀಸರು ನಾಲ್ಕು ಜನರನ್ನು ಬಂಧಿಸಿ ಮೊಖದ್ದಮೆ ದಾಖಲು ಮಾಡಿದ್ದಾರೆ.

Related Posts

Leave a Reply

Your email address will not be published.