ಎಲ್ಲೂರು ಗ್ರಾ.ಪಂ. ವ್ಯಾಪ್ತಿಯಲ್ಲಿ ದನಗಳಿಗೆ ವಿಚಿತ್ರ ಖಾಯಿಲೆ: ಆತಂಕದಲ್ಲಿ ಸ್ಥಳೀಯರು
ಜನವಿರೋಧಿಯಾಗಿ ಕಾರ್ಯಾಚರಿಸುತ್ತಿರುವ ಎಲ್ಲೂರು ಗ್ರಾ.ಪಂ. ವ್ಯಾಪ್ತಿಯಲ್ಲಿ ತಲೆ ಎತ್ತಿದ ಯುಪಿಸಿಎಲ್ ಕಂಪನಿಯ ಸುತ್ತಲ ಪ್ರದೇಶದಲ್ಲಿ ದನಗಳಿಗೆ ವಿಚಿತ್ರ ಖಾಯಿಲೆ ಕಾಣಿಸಿಕೊಂಡು ಬಹಳಷ್ಟು ದನಗಳು ಮರಣ ಹೊಂದುತ್ತಿದ್ದು ಪಶು ವೈದ್ಯರು ಮರಣೋತ್ತರ ಪರೀಕ್ಷೆ ನಡೆಸಿದರೂ ಯಾವುದೇ ವರದಿ ನೀಡುತ್ತಿಲ್ಲ ಎಂಬುದಾಗಿ ಸ್ಥಳೀಯರು ಆರೋಪಿಸಿದ್ದಾರೆ.
ಈ ಬಗ್ಗೆ ಎಲ್ಲೂರು ಗ್ರಾಮದ ತಜೆ ನಿವಾಸಿ ಹೈನುಗಾರಿಕೆಯನ್ನೇ ಜೀವನಾಧಾರವಾಗಿ ನಡೆಸಿಕೊಂಡು ಬಂದು ಇದೀಗ ಹತ್ತಕ್ಕೂ ಅಧಿಕ ದನಗಳನ್ನು ವಿಚಿತ್ರ ಖಾಯಿಲೆಯಿಂದ ಕಳೆದುಕೊಂಡ ಗಣೇಶ್ ರಾವ್ ಮಾತನಾಡಿ, ಆರಂಭದಲ್ಲಿ ಕೃಷಿ ಚಟುವಟಿಕೆಯನ್ನು ನಡೆಸಿ ಜೀವನ ರಥವನ್ನು ಸಾಗಿಸುತ್ತಿದೆ ಆದರೆ ಯುಪಿಸಿಎಲ್ ಕಂಪನಿಯ ಅವಾಂತರದಿಂದಾಗಿ ಹಾರುಬೂದಿ ಸಹಿತ ರಾಸಾಯನಿಕ ನೀರಿನ ಸಮಸ್ಯೆಯಿಂದ ಕೃಷಿ ನಾಶವಾಗಿ ಬಹಳಷ್ಟು ನಷ್ಟ ಅನುಭವಿಸುವಂತ್ತಾದ ಬಳಿಕ ಅನಿವಾರ್ಯ ಕಾರಣಗಳಿಂದ ಹೈನುಗಾರಿಕೆಯನ್ನು ನೆಚ್ಚಿಕೊಂಡು ಕಳೆದ ಆರು ವರ್ಷಗಳಿಂದ ಇದನ್ನು ನಡೆಸಿಕೊಂಡು ಬರುತ್ತಿದ್ದೇನೆಯಾದರೂ, ಕಂಪನಿಯ ಸಮಸ್ಯೆಯಿಂದಾಗಿ ಹತ್ತಕ್ಕೂ ಉತ್ತಮ ಥಳಿಯ ದನಗಳು ವಿಚಿತ್ರ ಖಾಯಿಲೆಗೆ ಬಲಿಯಾಗಿದೆ.
ಈ ಬಗ್ಗೆ ಪಶು ವೈದ್ಯರು ಇನ್ಶುರೆನ್ಸ್ ಗಾಗಿ ಮರಣೋತ್ತರ ಪರೀಕ್ಷೆ ನಡೆಸುತ್ತಿದ್ದರಾದರೂ ಯಾವ ಕಾರಣದಿಂದ ದನಗಳ ಮಾರಣಹೋಮ ನಡೆಯುತ್ತಿದೆ ಎಂಬ ವರದಿಯನ್ನು ನೀಡದಿರುವುದು ನಮಗೆ ಆತಂಕವಾಗಿದೆ. ಯಾಕೆ ಈ ರೀತಿ ಕಂಪನಿಯೊಂದಿಗಿನ ಒಡಂಬಡಿಕೆಯೋ ತಿಳಿಯುತ್ತಿಲ್ಲ ಈ ಬಗ್ಗೆ ಮುಂದಿನ ದಿನದಲ್ಲಿ ಜಿಲ್ಲಾಧಿಕಾರಿಗಳಿಗೆ ದೂರು ನೀಡುವುದಾಗಿ ತಿಳಿಸಿದ್ದಾರೆ.
ವರದಿ: ಸುರೇಶ್ ಎರ್ಮಾಳ್