ಕಂಬಳದ ದಾಖಲೆಯ ಓಟಗಾರನಿಗೆ ನಿಂದನೆ: ತಪ್ಪಿತಸ್ಥನ ವಿರುದ್ಧ ಕ್ರಮಕ್ಕೆ ಕಂಬಳಾಭಿಮಾನಿಗಳಿಂದ ಮನವಿ

ಮೂಡುಬಿದಿರೆ : ಕಂಬಳ ಕ್ಷೇತ್ರದಲ್ಲಿ ಸಾಧನೆ ಮಾಡಿ ” ಕರ್ನಾಟಕ ಕ್ರೀಡಾರತ್ನ” ಪ್ರಶಸ್ತಿಯನ್ನು ಪಡೆದಿರುವ, ಉಸೇನ್ ಬೋಲ್ಟ್ ಖ್ಯಾತಿಯ ಮಿಜಾರು ಅಶ್ವತ್ಥಪುರ ಶ್ರೀನಿವಾಸ ಗೌಡ ಅವರನ್ನು ದೂರವಾಣಿ ಕರೆಯ ಮುಖಾಂತರ ನಿಂದಿಸಿರುವ ಯುವಕನ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಕಂಬಳ ಕೋಣಗಳ ಯಜಮಾನರು ಹಾಗೂ ಶ್ರೀನಿವಾಸ ಗೌಡ ಅವರ ಅಭಿಮಾನಿಗಳು ಮೂಡುಬಿದಿರೆ ಪೊಲೀಸ್ ಠಾಣೆಗೆ ಮನವಿ ಸಲ್ಲಿಸಿದ್ದಾರೆ. ಆರೋಪಿಯ ವಿರುದ್ಧ ಕ್ರಮಕ್ಕೆ ಪೊಲೀಸರಿಗೆ ಶಾಸಕ ಉಮಾನಾಥ ಕೋಟ್ಯಾನ್ ಸೂಚನೆ ನೀಡಿದ್ದಾರೆ.


ಗುರುವಾರ ಕಂಬಳದ ಕುರಿತು ಪ್ರಶಾಂತ್ ಎಂಬಾತನ ಜೊತೆ ದೂರವಾಣಿಯಲ್ಲಿ ಮಾತನಾಡುತ್ತಿದ್ದಾಗ, ಆತ ತನ್ನನ್ನು, ತನ್ನ ಕುಟುಂಬದವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿರುವುದಾಗಿ ಶ್ರೀನಿವಾಸ ಗೌಡ ಅವರು ಮೂಡುಬಿದಿರೆ ಪೊಲೀಸರಿಗೆ ದೂರು ನೀಡಿದ್ದಾರೆ. ಸಾಧಕ ಓಟಗಾರನ ಅವಹೇಳನ ಮಾಡಿರುವುದನ್ನು ಕಂಬಳ ಕ್ಷೇತ್ರದ ಪ್ರಮುಖರು, ಕಂಬಳಾಭಿಮಾನಿಗಳು ಖಂಡಿಸಿದ್ದಾರೆ.

ಕಂಬಳ ಕ್ಷೇತ್ರದಲ್ಲಿ ಅದ್ವಿತೀಯ ಸಾಧನೆ ಮಾಡಿರುವ ಶ್ರೀನಿವಾಸ ಗೌಡ, ಅವರ ಕುಟುಂಬದವರನ್ನು ಯುವಕನೋರ್ವ ಅಪಮಾನ ಮಾಡಿರುವುದು ಕೇವಲ ಅವರಿಗೆ ಮಾಡಿರುವ ಅಪಮಾನವಲ್ಲ. ಇದು ಕಂಬಳ ಕ್ಷೇತ್ರಕ್ಕೆ, ತುಳುನಾಡಿಗೆ ಮಾಡಿರುವ ಅಪಮಾನ. ತಪಿತಸ್ಥನ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಸೂಚಿಸಿದ್ದೇನೆ ಎಂದು ಶಾಸಕ ಉಮಾನಾಥ ಕೋಟ್ಯಾನ್ ಹೇಳಿಕೆ ನೀಡಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಮಾಜಿ ಸಚಿವ ಅಭಯಚಂದ್ರ ಜೈನ್ ಅವರು, ಕರ್ನಾಟಕ ಸರಕಾರದಿಂದ ಕ್ರೀಡಾರತ್ನ ಪ್ರಶಸ್ತಿಯನ್ನು ಪಡೆದಿರುವ ಕಂಬಳದ ಶ್ರೇಷ್ಟ ಓಟಗಾರ, ಕುಡುಬಿ ಸಮಾಜದ ಮುಗ್ಧ ಯುವಕ ಶ್ರೀನಿವಾಸ ಗೌಡರಿಗೆ ಕಿಡಿಗೇಡಿಗಳು ಜೀವ ಬೆದರಿಕೆಯನ್ನು ಹಾಕಿರುವುದಕ್ಕೆ ಖಂಡಿಸುತ್ತೇವೆ. ಜಾನಪದ ಕ್ರೀಡೆ ಉಳಿಯಬೇಕೆನ್ನುವ ನಿಟ್ಟಿನಲ್ಲಿ ಮತ್ತು ಪ್ರೋತ್ಸಾಹಿಸಬೇಕೆನ್ನುವ ನಿಟ್ಟಿನಲ್ಲಿ ತಾನು ಕ್ರೀಡಾ ಸಚಿವನಾಗಿದ್ದಾಗ ಕಂಬಳ ಕ್ಷೇತ್ರದ ಓಟಗಾರರಿಗೆ ಮತ್ತು ಕಂಬಳದ ಸಂಯೋಜಕರಿಗೆ ಕ್ರೀಡಾರತ್ನ ಪ್ರಶಸ್ತಿಯನ್ನು ಘೋಷಿಸುವಂತಹ ಕೆಲಸ ಮಾಡಿದ್ದೆ. ಓರ್ವ ಕಂಬಳದ ಓಟಗಾರನಿಗೆ ಅವಮಾನ ಮಾಡಿರುವಾತನನ್ನು ಉನ್ನತ ಪೊಲೀಸ್ ಅಧಿಕಾರಿಗಳು ಜೈಲುಗಟ್ಟಬೇಕು ಎಂದು ವಾಗ್ದಾಳಿ ನಡೆಸಿದರು.

Related Posts

Leave a Reply

Your email address will not be published.