ಕಕ್ಕುಂದೂರಿನಲ್ಲಿರುವ ಕ್ರೈಸ್ತ ಪ್ರಾರ್ಥನಾಲಯಕ್ಕೆ ಹಿಂದೂ ಸಂಘಟನೆಯಿಂದ ದಾಳಿ
ಉಡುಪಿ ಜಿಲ್ಲೆಯ ಕಾರ್ಕಾಳ ತಾಲೂಕಿನ ಕಕ್ಕುಂದೂರು ಗ್ರಾಮದಲ್ಲಿರುವ ಪ್ರಗತಿ ಕ್ರೈಸ್ತ ಪ್ರಾರ್ಥನಾಲಯದಲ್ಲಿ ಮತಾಂತರ ನಡೆಯುತ್ತಿದೆ ಎಂದು ಆರೋಪಿಸಿ, ಬಿಜೆಪಿ ಬೆಂಬಲಿತ ಹಿಂದೂ ಸಂಘಟನೆ ಕಾರ್ಯಕರ್ತರು ದಾಳಿ ಮಾಡಿರುವ ಘಟನೆ ಶುಕ್ರವಾರ ನಡೆದಿದೆ.
ಈ ಬಗ್ಗೆ ಕಾರ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪ್ರಾರ್ಥನೆಯ ಸಮಯದಲ್ಲಿ ಸುಮಾರು 25 ಜನರು ಬಂದು ಹಲ್ಲೆ ಮಾಡಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ ಜಿಲ್ಲೆಯ ಕಾರ್ಕಳ ತಾಲೂಕಿನ ಕುಕ್ಕುಂದೂರು ಗ್ರಾಮದಲ್ಲಿನ ನಕ್ರೆ ಆನಂದಿ ಮೈದಾನದ ಪ್ರಗತಿ ಪ್ರಾಥನಾಲಯ ಕಾರ್ಯಾಚರಿಸುತ್ತಿದೆ. ಅಲ್ಲಿ ಬೆನಡಿಕ್ಟ್ ಎಂಬವರು ಅಕ್ರಮವಾಗಿ ಮತಾಂತರ ನಡೆಸುತ್ತಿದ್ದಾರೆ ಎಂದು ಆರೋಪಿಸಿ ಬಿಜೆಪಿ ಬೆಂಬಲಿತ ಸಂಘಟನೆಯ ಕಾರ್ಯಕರ್ತರು, ಪ್ರಾರ್ಥನಾಲಯಕ್ಕೆ ಏಕಾಏಕಿ ನುಗ್ಗಿ ಗಲಾಟೆ ನಡೆಸಿದ್ದಾರೆ. ದಾಳಿಯ ವೇಳೆ ಸ್ಥಳದಲ್ಲಿ ಹಲವಾರು ಮಹಿಳೆಯರು, ಮಕ್ಕಳು ಪ್ರಾರ್ಥನೆ ನಡೆಸುತ್ತಿದ್ದರು ಎಂದು ವರದಿಯಾಗಿದೆ. ಪ್ರಾರ್ಥನೆ ಮಾಡುತ್ತಿದ್ದಾಗ ಒಳ ನುಗ್ಗಿದ ದುಷ್ಕರ್ಮಿಗಳು ಅಲ್ಲಿ ಗಲಾಟೆ ಮಾಡಿದ್ದಾರೆ. ಈ ವೇಳೆ ಸ್ಥಳದಲ್ಲಿ ಉದ್ವಿಗ್ನ ಪರಿಸ್ಥಿತಿ ಉಂಟಾಗಿದ್ದು, ಪೊಲೀಸರ ಮಧ್ಯ ಪ್ರವೇಶದಿಂದ ಪರಿಸ್ಥಿತಿ ತಿಳಿಗೊಂಡಿದೆ ಎಂದು ವರದಿಯಾಗಿದೆ.