ಕಡಂದಲೆ ಪಾಲಡ್ಕದಲ್ಲಿ ವಿದ್ಯುತ್ ಉಪಕೇಂದ್ರ ಸ್ಥಾಪನೆಗೆ ಗ್ರಾಮಸ್ಥರ ವಿರೋಧ
ಮೂಡುಬಿದಿರೆ : ಪಾಲಡ್ಕ ಗ್ರಾ.ಪಂ. ವ್ಯಾಪ್ತಿಯ ಕಡಂದಲೆಯಲ್ಲಿ 400/320 ಕೆ.ವಿ. ವಿದ್ಯುತ್ ಉಪಕೇಂದ್ರಕ್ಕೆ 400 ಕೆ.ವಿ. ಬಹುಮಂಡಲ ವಿದ್ಯುತ್ ಪ್ರಸರಣ ಮಾರ್ಗ ನಿರ್ಮಾಣ ಮೊದಲಾದ ಕಾಮಗಾರಿಗಳಿಗೆ ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಪಾಲಡ್ಕ ಪೂಪಾಡಿಕಲ್ಲು ಬ್ರಹ್ಮಶ್ರೀ ನಾರಾಯಣಗುರು ಸಭಾಭವನದಲ್ಲಿ ನಡೆದ ಪಾಲಡ್ಕ ಗ್ರಾ.ಪಂ. ವಿಶೇಷ ಗ್ರಾಮಸಭೆಯಲ್ಲಿ ವಿದ್ಯುತ್ ಉಪಕೇಂದ್ರ ಸ್ಥಾಪನೆಗೆ ಗ್ರಾಮಸ್ಥರ ವಿರೋಧವಿದೆ ಎಂದು ಪಂಚಾಯತ್ ನಿರ್ಣಯ ದಾಖಲಿಸಿದೆ.
ಕೆಪಿಸಿಎಲ್ ಕಾ.ನಿ ಎಂಜಿನಿಯರ್ ಅಧಿಕಾರಿ ಗಂಗಾಧರ ಅವರು ಯೋಜನೆಯ ಬಗ್ಗೆ, ಸಂತ್ರಸ್ತರಿಗೆ ನೀಡಲಾಗುವ ಪರಿಹಾರ ಧನದ ಬಗ್ಗೆ ವಿವರಣೆ ನೀಡಿ ಈ ಯೋಜನೆಯನ್ನು ಇತರ ವಿದ್ಯುತ್ ಉತ್ಪಾದನ ಘಟಕಗಳಲ್ಲಿ ಉತ್ಪಾದನೆಯಾಗುವ ವಿದ್ಯುತ್ನ್ನು ದ.ಕ. ಉಡುಪಿ ಜಿಲ್ಲೆಗಳ ಬೇಡಿಕೆಗನುಸಾರವಾಗಿ ಪೂರೈಕೆ ಮಾಡಲು ಬೇಕಾದ ವಿದ್ಯುತ್ ಅದನ್ನು ಬಲವರ್ಧಿಸಲು ಕೈಗೆತ್ತಿಕೊಂಡಿದ್ದು ಯಾವುದೇ ರೀತಿಯ ವಿದ್ಯುತ್ ಉತ್ಪಾದನೆ ಇಲ್ಲ ನಡೆಯುವುದಿಲ್ಲ ಈ ಉಪಕೇಂದ್ರ ಮತ್ತು ಪ್ರಸರಣ ಮಾರ್ಗದಿಂದ ಯಾವುದೇ ವಾಯುಮಾಲಿನ್ಯ ವಾತಾವರಣ ದಲ್ಲಿ ಉಷ್ಣತೆ ಹೆಚ್ಚಳ, ಸಹಿತ ಪರಿಸರ ಮಾಲಿನ್ಯವಾಗುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು. ಈ ಸಂದರ್ಭ ಗ್ರಾಮಸ್ಥರು ಮಾತನಾಡಿ ಟೆಂಡರ್ ಕರೆದ ಬಳಿಕ ಸಭೆ ಏಕೆ ಕರೆದದ್ದು ಎಂದು ಪ್ರಶ್ನಿಸಿದರು. ಶಾಸಕ ಉಮಾನಾಥ ಕೋಟ್ಯಾನ್ ಕೂಡ ಅಧಿಕಾರಿಯನ್ನು ಈ ಬಗ್ಗೆ ಜನರಿಗೆ ಸ್ಪಷ್ಟವಾಗಿ ಮುಂಚಿತವಾಗಿ ಮಾಹಿತಿ ಏಕೆ ನೀಡಿಲ್ಲ ಎಂದು ವಿಚಾರಿಸಿದಾಗ ಅಧಿಕಾರಿ ಸಮರ್ಪಕ ಉತ್ತರ ನೀಡದೆ ಮೌನ ವಹಿಸಿದರು. ಆದರೆ, ಅವರು ಇಲ್ಲ ಕೃಷಿಕರಿದ್ದಾರೆ, ಮನೆಗಳಿವೆ ಆದ್ದರಿಂದ ಈ ಯೋಜನೆ ತಮಗೆ ಬೇಡವೇ ಬೇಡ ಎಂದು ತಮ್ಮ ವಿರೋಧವನ್ನು ಒಕ್ಕೊರಲಿನಿಂದ ವ್ಯಕ್ತಪಡಿಸಿದರು.
ಶಾಸಕ ಉಮಾನಾಥ ಕೋಟ್ಯಾನ್ ಮಾತನಾಡಿ ಜನಪರವಾದ ಯೋಜನೆಗಳು ಜನರಿಗೆ ಯೋಜನೆಯ ಬಗ್ಗೆ ಸಮರ್ಪಕ ಮಾಹಿತಿ ನೀಡಬೇಕಾಗಿತ್ತು ಯಾವ ಸರಕಾರ ಬಂದರೂ ಅಭಿವೃದ್ಧಿ ಕಾರ್ಯ ನಡೆಸಲು ಮುಂದಾಗುವುದು ಸಹಜವೇ ಯಾರೂ ಅಪಪ್ರಚಾರ ಮಾಡಬೇಡಿ. ಇದರಲ್ಲಿ ಪಕ್ಷ ರಾಜಕೀಯ ಇಲ್ಲ. ಏನಿದ್ದರೂ ಯೋಜನೆಯ ಬಗ್ಗೆ ಇಂಧನ ಸಚಿವ ಸುನಿಲ್ ಕುಮಾರರ ಗಮನ ಸೆಳೆದು ಸಮಸ್ಯೆ ಪರಿಹಾರಕ್ಕೆ ಪ್ರಯತ್ನಿಸುತ್ತೇನೆ ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಕೆ.ಪಿ. ಸಂತೋಷ್ ಶೆಟ್ಟಿ, ಪಂಚಾಯತ್ ಅಧ್ಯಕ್ಷ ದಿನೇಶ್ ಕಾಂಗ್ಲಾಯ, ಉಪಾಧ್ಯಕ್ಷ ಸುಕೇಶ ಶೆಟ್ಟಿ, ಕೆ.ಪಿಎಸಿಎ ಸ.ಕಾ.ನಿ. ಎಂಜಿನಿಯರ್ ಶ್ರೀಕಾಂತ್ ಆಚಾರ್, ಗ್ರಾ. ಪಂ ಮಾಜಿ ಸದಸ್ಯೆ ಸುನೀತಾ ಎಸ್. ಶೆಟ್ಟಿ, ಪಂ. ಸದಸ್ಯರು, ಗ್ರಾಮಕರಣಿಕ ಶ್ರೀನಿವಾಸ,
ಪಿಡಿಓ ರಕ್ಷಿತಾ ಉಪಸ್ಥಿತರಿದ್ದರು.