ಕತ್ತು ಕೊಯ್ದು ಯುವ ಉದ್ಯಮಿಯ ಬರ್ಬರ ಹತ್ಯೆ
ಕುಂದಾಪುರ: ಕುಂದಾಪುರ ತಾಲೂಕಿನ ಕೋಟೇಶ್ವರ ಸಮೀಪದ ಕಾಳಾವರದಲ್ಲಿ ಫೈನಾನ್ಸ್ ವ್ಯವಹಾರ ನಡೆಸುತ್ತಿದ್ದ ಉದ್ಯಮಿಯೋರ್ವರನ ಕುತ್ತಿಗೆ ಕತ್ತರಿಸಿ ಭೀಕರವಾಗಿ ಹತ್ಯೆಗೈದ ಘಟನೆ ಶುಕ್ರವಾರ ತಡರಾತ್ರಿ ನಡೆದಿದೆ.
ತಾಲೂಕಿನ ಯಡಾಡಿ ಮತ್ಯಾಡಿ ಕೂಡಲ್ ನಿವಾಸಿ ಅಜೇಂದ್ರ ಶೆಟ್ಟಿ (33) ಕೊಲೆಯಾದ ಉದ್ಯಮಿ. ಮೇಲ್ನೋಟಕ್ಕೆ ಹಣಕಾಸು ವಿಚಾರದಲ್ಲಿ ಈ ಕೊಲೆ ನಡೆದಿದೆ ಎಂದು ಪೊಲೀಸರು ಶಂಕಿಸಿದ್ದಾರೆ.
ಅಜೇಂದ್ರ ಅವರು ಕಳೆದ ಕೆಲ ವರ್ಷಗಳಿಂದ ಅಸೋಡು-ಕಾಳಾವರ ಎಂಬಲ್ಲಿ ಸ್ನೇಹಿತ ಅನೂಪ್ ಶೆಟ್ಟಿಯೊಂದಿಗೆ ಪಾಲುದಾರಿಕೆಯೊಂದಿಗೆ ಡ್ರೀಮ್ ಫೈನಾನ್ಸ್ ಎನ್ನುವ ಫೈನಾನ್ಸ್ ಸಂಸ್ಥೆಯನ್ನು ನಡೆಸುತ್ತಿದ್ದರು. ಶುಕ್ರವಾರ ಅಜೇಂದ್ರ ಶೆಟ್ಟಿ ರಾತ್ರಿಯಾದರೂ ಮನೆಗೆ ಹಿಂತಿರುಗದ ಕಾರಣ ಮನೆಯವರು ಅವರ ಸ್ನೇಹಿತರೊಂದಿಗೆ ಹುಡುಕಾಟ ಆರಂಭಿಸಿದ್ದಾರೆ. ಅಜೇಂದ್ರ ಅವರ ಕಚೇರಗೆ ಬಂದು ನೋಡಿದಾಗ ಫೈನಾನ್ಸ್ ಕಚೇರಿ ಒಳಗೆ ಕೊಲೆಯಾದ ಸ್ಥಿತಿಯಲ್ಲಿ ಅಜೇಂದ್ರ ಪತ್ತೆಯಾಗಿದ್ದಾರೆ.
ಸದ್ಯ ಅಜೇಂದ್ರ ಸ್ನೇಹಿತ ಅನೂಪ್ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ತಲೆಮರೆಸಿಕೊಂಡಿದ್ದಾನೆ. ಅಜೇಂದ್ರ ಇತ್ತೀಚೆಗಷ್ಟೇ ಹೊಸ ಕಾರು ಖರೀದಿಸಿದ್ದು, ಅದೇ ಕಾರಿನಲ್ಲಿ ಅನೂಪ್ ಪರಾರಿಯಾಗಿದ್ದಾನೆ ಎನ್ನಲಾಗಿದೆ. ಪೊಲೀಸರು ಆತನ ಪತ್ತೆಗಾಗಿ ಬಲೆ ಬೀಸಿದ್ದಾರೆ.
ಘಟನಾ ಸ್ಥಳಕ್ಕೆ ಉಡುಪಿ ಎಸ್ಪಿ ವಿಷ್ಣುವರ್ಧನ್, ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿದ್ದಾರೆ.ಈ ಬಗ್ಗೆ ಕುಂದಾಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.