ಕರಾವಳಿಯಲ್ಲಿ ಚುರುಕುಗೊಂಡ ಮಳೆ
ರಾಜ್ಯದಲ್ಲಿ ಮುಂಗಾರು ಮಳೆ ಚುರುಕುಗೊಂಡಿದೆ. ಕರಾವಳಿ ಭಾಗದಲ್ಲಿ ಬೆಳಗ್ಗೆಯಿಂದಲೇ ದಟ್ಟ ಮೋಡ ಕವಿದು ಮಳೆ ಸುರಿಯುತ್ತಿದೆ. ರಾಜ್ಯದ ಹಲವೆಡೆ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮೂನ್ಸೂಚನೆ ನೀಡಿತ್ತು.
ಹವಾಮಾನ ಇಲಾಖೆ ವರದಿ ಪ್ರಕಾರ ಈ ವಾತಾವರಣ ಇನ್ನೂ ಮೂರ್ನಾಲ್ಕು ದಿನಗಳ ಕಾಲ ಮುಂದುವರೆಯಲಿದ್ದು, ಉತ್ತಮ ಮಳೆಯಾಗುವ ನಿರೀಕ್ಷೆ ಇದೆ. ಈ ಬಾರಿ ಬೇಸಿಗೆಯಿಂದಲೇ ಅಂದರೆ ಮೇ ತಿಂಗಳ ಆರಂಭದಿಂದಲೇ ಆಗಾಗ ಮಳೆ ಸುರಿಯುತ್ತಿತ್ತಾದರೂ ಮುಂಗಾರು ಪ್ರವೇಶದ ನಂತರ ಮೊದಲ ಒಂದೆರೆಡು ವಾರಗಳನ್ನು ಹೊರತುಪಡಿಸಿದರೆ ಎಲ್ಲೆಡೆ ಮಳೆ ಕ್ಷೀಣವಾಗಿತ್ತು. ಆದರೆ, ಇದೀಗ ಮತ್ತೆ ವರುಣ ಪುನಾರಾಗಮನ ಮಾಡುವಂತೆ ತೋರುತ್ತಿದ್ದು, ಮಲೆನಾಡು, ಕರಾವಳಿ ಸೇರಿದಂತೆ ಹಲವು ಪ್ರದೇಶಗಳಲ್ಲಿ ಭಾರೀ ಮಳೆಯನ್ನು ನಿರೀಕ್ಷಿಸಲಾಗಿದೆ.
ಸದ್ಯ ಕರ್ನಾಟಕದ ಕರಾವಳಿ, ದಕ್ಷಿಣ ಒಳನಾಡು, ಉತ್ತರ ಒಳನಾಡಿನಲ್ಲಿ ಮಳೆ ಜೋರಾಗುವ ಸಾಧ್ಯತೆಯಿದೆ. ಕರಾವಳಿ ಜಿಲ್ಲೆಗಳಲ್ಲಿ ವರುಣನ ಅಬ್ಬರ ಹೆಚ್ಚಾಗಲಿದ್ದು, ಮುಂದಿನ ಎರಡು ದಿನ ಕರಾವಳಿ ಭಾಗದಲ್ಲಿ ಗುಡುಗು ಸಹಿತ ಮಳೆ ಸುರಿಯುವ ಸಾಧ್ಯತೆಯಿದೆ. ದಕ್ಷಿಣ ಒಳನಾಡು ಭಾಗದಲ್ಲಿ ಇನ್ನೂ 3 ದಿನ ಮಳೆಯಾಗಲಿದ್ದು, ಉತ್ತರ ಒಳನಾಡಿನಲ್ಲೂ ಸಾಧಾರಣ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ನಿರ್ದೇಶಕ ಸಿ.ಎಸ್. ಪಾಟೀಲ್ ಮುನ್ಸೂಚನೆ ನೀಡಿದ್ದಾರೆ.