ಕಾಂಗ್ರೆಸ್ ವಿರೋಧ ಮಾಡುವುದರಲ್ಲೇ ಕಾಲಹರಣ ಮಾಡುತ್ತಿದೆ: ಪುತ್ತೂರಿನಲ್ಲಿ ನಳಿನ್ ಕುಮಾರ್ 

ಕಾಂಗ್ರೆಸ್ ಪಕ್ಷಕ್ಕೆ ವಿರೋಧ ಮಾಡುವುದು ಬಿಟ್ಟು, ಬೇರೆ ವಿಷಯವೇ ತಿಳಿದಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಕಾಂಗ್ರೇಸ್ ಗೆ ತಿರುಗೇಟು ನೀಡಿದ್ದಾರೆ. ಪುತ್ತೂರಿನಲ್ಲಿ ಆಶಾ ಕಾರ್ಯಕರ್ತೆಯರಿಗೆ ಕಿಟ್ ವಿತರಣಾ ಸಮಾರಂಭದಲ್ಲಿ ಭಾಗಿಯಾಗಿ ಅವರು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಪೆಟ್ರೋಲ್, ಡೀಸೇಲ್ ನ ಬೆಲೆ ಏರಿಕೆಯನ್ನು ವಿರೋಧಿಸಿ ಕಾಂಗ್ರೇಸ್ ಪಕ್ಷ ರಾಜ್ಯದಾದ್ಯಂತ ಪ್ರತಿಭಟನೆಯನ್ನು ನಡೆಸುತ್ತಿದ್ದು, ಈ ಪ್ರತಿಭಟನೆಯ ವಿರುದ್ಧ ನಳಿನ್ ಕುಮಾರ್ ಕಟೀಲ್ ಕಿಡಿ ಕಾರಿದ್ದಾರೆ.

ದೇಶದಲ್ಲಿ ಬಿಜೆಪಿ ನೇತೃತ್ವದ ಸರಕಾರ ಅಧಿಕಾರಕ್ಕೆ ಬಂದ ಬಳಿಕ ಕಾಂಗ್ರೇಸ್ ಪಕ್ಷ ಎಲ್ಲವನ್ನೂ ವಿರೋಧ ಮಾಡಲು ಆರಂಭಿಸಿದೆ. ಕೇಂದ್ರ ಸರಕಾರ ದೇಶದಲ್ಲಿ ಯಾವುದೇ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಂಡರೆ ಅದಕ್ಕೂ ವಿರೋಧ, ಜನಪರ ವ್ಯವಸ್ಥೆಗಳನ್ನು ಕೈಗೊಂಡಲ್ಲಿ ಅದಕ್ಕೂ ವಿರೋಧ ಮಾಡುತ್ತಿರುವ ಕಾಂಗ್ರೇಸ್ ಇತ್ತೀಚೆಗೆ ಕೋವಿಡ್ ಲಸಿಕೆ ವಿಚಾರದಲ್ಲೂ ದೇಶದಾದ್ಯಂತ ವಿರೋಧ ಮಾಡಿತ್ತು. ಇದೀಗ ಪೆಟ್ರೋಲ್, ಡಿಸೇಲ್ ವಿಚಾರದಲ್ಲಿ ಕಾಂಗ್ರೇಸ್ ರಾಜಕೀಯ ಮಾಡುತ್ತಿದೆ ಎಂದು ಆರೋಪಿಸಿದ ಅವರು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಛಾ ತೈಲ ಬೆಲೆ ಏರಿಕೆಯಾದ ಹಿನ್ನಲೆಯಲ್ಲಿ ಅನಿವಾರ್ಯವಾಗಿ ದೇಶದಲ್ಲೂ ಪೆಟ್ರೋಲ್, ಡಿಸೇಲ್ ಬೆಲೆಗಳನ್ನು ಏರಿಸಬೇಕಾಗಿದೆ. ಈ ಬೆಳವಣಿಗೆ ದೇಶದಲ್ಲಿ ಎಲ್ಲಾ ಪಕ್ಷಗಳ ಆಡಳಿತವಿದ್ದಾಗಲೂ ನಡೆದುಕೊಂಡು ಬಂದಿದೆ. ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಅಧಿಕಾರಕ್ಕೆ ಬಂದ ಬಳಿಕ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆ ಏರಿಕೆ ಹಾಗೂ ಇಳಿಕೆಯ ಅಧಾರದ ಮೇಲೆ ದೇಶದಲ್ಲೂ ಪೆಟ್ರೋಲ್ ಹಾಗೂ ಡಿಸೇಲ್ ಬೆಲೆಯಲ್ಲಿ ಏರಿಕೆ, ಇಳಿಕೆ ಮಾಡುತ್ತಿದೆ. ಕೊರೊನಾ ಮಹಾಮಾರಿಯ ಸಂಕಷ್ಟದ ದಿನಗಳಲ್ಲಿ ದೇಶದ ಆರ್ಥಿಕ ಪರಿಸ್ಥಿತಿ ಕುಸಿಯದಂತೆ ಹಾಗೂ ದೇಶದ ಜನತೆಯ ಹಿತದೃಷ್ಟಿಯಿಂದ ಕೇಂದ್ರ ಹಲವು ನಿರ್ಧಾರಗಳನ್ನು ಕೈಗೊಂಡಿದ್ದು, ಬೆಲೆ ಇಳಿಕೆಯ ಬಗ್ಗೆಯೂ ಶೀಘ್ರವೇ ನಿರ್ಧಾರ ತೆಗೆದುಕೊಳ್ಳಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು. ಕೊರೊನಾ ಸಂಕಷ್ಟದಲ್ಲೂ ದೇಶದ ಎಲ್ಲಾ ಪ್ರಜೆಗಳಿಗೂ ಕೋವಿಡ್ ನಿಯಂತ್ರಣ ಲಸಿಕೆಯನ್ನು ಉಚಿತವಾಗಿ ನೀಡಲು ಕೇಂದ್ರ ಸರಕಾರ ವ್ಯವಸ್ಥೆ ಮಾಡಿದೆ. ಅಲ್ಲದೆ ಕೊರೊನಾ ಸಂಕಷ್ಟದ ಸಮಯದಲ್ಲಿ ಬಡ ಜನತೆ ಹಸಿವಿನಿಂದ ಬಳಲದಿರಲಿ ಎನ್ನುವ ಉದ್ಧೇಶದಿಂದ ಕೊರೊನಾದ ಮೊದಲ ಅಲೆ ಹಾಗೂ ಎರಡನೇ ಅಲೆಯ ಈ ಸಂದರ್ಭದಲ್ಲೂ ಬಡವರಿಗೆ ಉಚಿತ ಪಡಿತರ ವ್ಯವಸ್ಥೆಯನ್ನೂ ಕಲ್ಪಿಸಿದೆ. ಜೂನ್ 14 ರ ಬಳಿಕ ರಾಜ್ಯದ ಹಲವು ಜಿಲ್ಲೆಗಳಲ್ಲ ಅನ್ ಲಾಕ್ ಪ್ರಕ್ರಿಯೆ ಆರಂಭಗೊಳ್ಳಲಿದ್ದು, ದಕ್ಷಿಣಕನ್ನಡ ಜಿಲ್ಲೆಯಲ್ಲಿ ಮಾತ್ರ ಲಾಕ್ ಡೌನ್ ಮುಂದುವರಿಸುವ ಅನಿವಾರ್ಯತೆಯಿದೆ. ಜಿಲ್ಲೆಯಲ್ಲಿ ಪ್ರತಿನಿತ್ಯ 500ಕ್ಕೂ ಮಿಕ್ಕಿದ ಕೊರೊನಾ ಪಾಸಿಟೀವ್ ಪ್ರಕರಣಗಳು ವರದಿಯಾಗುತ್ತಿದ್ದು, ಈ ಸಂಖ್ಯೆ ಕಡಿಮೆಯಾಗದೆ ಜಿಲ್ಲೆಯಲ್ಲಿ ಅನ್ ಲಾಕ್ ಪ್ರಕ್ರಿಯೆ ಆರಂಭಿಸುವುದು ಕಷ್ಟಸಾಧ್ಯ ಎಂದ ಅವರು ಜಿಲ್ಲೆಯ ಜನತೆ ಕೊರೊನಾ ನಿಯಂತ್ರಣದಲ್ಲಿ ಸರಕಾರದೊಂದಿಗೆ ಕೈ ಜೋಡಿಸಬೇಕೆಂದು ಮನವಿ ಮಾಡಿದರು. ಅಗತ್ಯವಿದ್ದಲ್ಲಿ ಮಾತ್ರವೇ ಜನ ಮನೆಯಿಂದ ಹೊರಬರಬೇಕೆಂದು ಮನವಿ ಮಾಡಿದ ಅವರು ಕೋವಿಡ್ ವಿಚಾರದಲ್ಲಿ ಜಿಲ್ಲೆಯ ಜನ ಜಾಗರೂಕರಾಗಿರಬೇಕೆಂದರು.

Related Posts

Leave a Reply

Your email address will not be published.