ಕಾಪು : ಗಾಯಗೊಂಡ ರಾಷ್ಟ್ರ ಪಕ್ಷಿಯನ್ನು ರಕ್ಷಿಸಿದ ಯುವಕರು
ಕಾಲಿಗೆ ಗಾಯಗೊಂಡು ತೀವ್ರ ಅಸ್ವಸ್ಥಗೊಂಡ ಗಂಡು ನವಿಲೊಂದನ್ನು ಕಾಪುವಿನ ಯುವಕರು ರಕ್ಷಿಸಿ, ಪ್ರಾಥಮಿಕ ಚಿಕಿತ್ಸೆ ನೀಡಿ ಅರಣ್ಯಾಧಿಕಾರಿಯವರಿಗೆ ಒಪ್ಪಿಸಿದ ಘಟನೆ ನಡೆದಿದೆ.
ಮೂಳೂರು ಬಳಿ ಕಾಲಿಗೆ ತೀವ್ರ ಗಾಯಗೊಂಡ ಸ್ಥಿತಿಯಲ್ಲಿದ್ದ ಗಂಡು ನವಿಲನ್ನು ಕಾಪುವಿನ ಪ್ರಶಾಂತ್ ಪೂಜಾರಿ ಹಾಗೂ ಶಿವಾನಂದ ಪೂಜಾರಿ ಅವರು ಗುರುವಾರ ರಾತ್ರಿ ತಮ್ಮ ಮನೆಗೆ ತಂದು ಆರೈಕೆ ಮಾಡಿದ್ದರು.
ಆರೈಕೆಯೊಂದಿಗೆ ಚೇತರಿಕೆಗೊಂಡ ನವಿಲನ್ನು ಅರಣ್ಯ ಅಧಿಕಾರಿ ಮಂಜುನಾಥ್ ಅವರಿಗೆ ಒಪ್ಪಿಸಿದ್ದಾರೆ. ಈ ಸಂದರ್ಭ ಮಂಜುನಾಥ ಅವರು ಮಾತನಾಡಿ, ಸುಮಾರು ಐದು ವರ್ಷ ಪ್ರಾಯದ ಗಂಡು ನವಿಲು ಇದಾಗಿದ್ದು, ಸ್ಥಳೀಯರಾದ ಪ್ರಶಾಂತ್ ಹಾಗೂ ಶಿವನಂದ ರವರು ರಕ್ಷಿಸಿ ಅರಣ್ಯ ಇಲಾಖೆಗೆ ಒಪ್ಪಿಸಿದ್ದಾರೆ. ನಾವು ಕಟಪಾಡಿಯ ಪಶು ವೈದ್ಯಾಧಿಕಾರಿಯವರಿಗೆ ತೋರಿಸಿ, ಅಲ್ಲಿ ನವಿಲಿಗೆ ಚಿಕಿತ್ಸೆ ನೀಡಿ, ಮುಂದಿನ ಕ್ರಮ ಕೈಗೊಳ್ಳಲಿದ್ದೇವೆ ತಿಳಿಸಿದ್ದಾರೆ.