ಕಾಪು ಪುರಸಭೆ ಚುನಾವಣೆ: ಬಿಜೆಪಿಗೆ ಬಂಡಾಯ ಬಿಸಿ
ಕಾಪು ಪುರಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಕಾಂಗ್ರೆಸ್ ಬಿಜೆಪಿ ಎರಡೂ ಪಕ್ಷಗಳೂ ಆಕಾಂಕ್ಷಿಗಳ ಪಟ್ಟಿ ಬೆಳೆಯುತ್ತಿದ್ದು, ಬಂಡಾಯದ ಬಿಸಿ ಬಿಜೆಪಿಯನ್ನು ಸುಡಲಿದೆಯೇ ಎಂಬ ಆತಂಕ ಬಿಜೆಪಿ ಪಾಳಾಯದಲ್ಲಿ ಮೂಡಿದೆ.ನಾಮಪತ್ರ ಸಲ್ಲಿಕೆಗೆ ಡಿ.15 ಅಂತಿಮ ದಿನವಾಗಿದ್ದು, ಇದೀಗ ಬಿಜೆಪಿ ಅಂತಿಮ ಪಟ್ಟಿ ಬಿಡುಗಡೆಗೊಳಿಸುತ್ತಿರುವಂತೆ, ಟಿಕೇಟ್ ವಂಚಿತರು ಕೆಂಡಾಮಂಡಲವಾಗಿದ್ದಾರೆ. ಪಕ್ಷಕ್ಕಾಗಿ ದುಡಿದ ನಮಗೆ ನಮ್ಮದೇ ಪಕ್ಷದ ನಾಯಕರಿಂದ ಅನ್ಯಾಯವಾಗಿದೆ ಎಂಬ ಮಾತುಗಳು ಅತೃಪ್ತರ ವಲಯದಲ್ಲಿ ಕೇಳಿ ಬರುತ್ತಿದೆ. ಯಾವುದೇ ಕಾರಣಕ್ಕೆ ಬಂಡಾಯ ಸ್ಪರ್ಧೆಯಿಂದ ಹಿಂದೆ ಸರಿಯುವ ಮಾತೆ ಇಲ್ಲ ಎನ್ನುತ್ತಿದ್ದಾರೆ.
ಆದರೆ ಬಿಜೆಪಿ ಕಛೇರಿಯಲ್ಲಿ ನಡೆದ ಅಭ್ಯರ್ಥಿಗಳ ಅಂತಿಮ ಪಟ್ಟಿ ಬಿಡುಗಡೆ ಮಾಡಿ ಮಾತನಾಡಿದ ಕ್ಷೇತ್ರಾಧ್ಯಕ್ಷ ಕೊಯಿಲಾಡಿ ಸುರೇಶ್ ನಾಯಕ್ ಮಾತನಾಡಿ, ಯಾವುದೇ ಪಕ್ಷದಲ್ಲಿ ಚುನಾವಣಾ ಸ್ಪರ್ಧೆಗೆ ಆಕಾಂಕ್ಷಿಗಳು ಸರ್ವೇ ಸಾಮಾನ್ಯ, ಆಗಂತ ಎಲ್ಲರಿಗೂ ಟಿಕೇಟ್ ನೀಡಲು ಸಾಧ್ಯವಿಲ್ಲ, ಪಕ್ಷ ಎಂದರೆ ತಾಯಿ ಇದ್ದಂತೆ, ತಾಯಿಗೆ ಹೇಗೆ ದ್ರೋಹ ಮಾಡಲು ಸಾಧ್ಯವಿಲ್ಲವೂ ಅದೇ ರೀತಿ ಪಕ್ಷಕ್ಕೂ ದ್ರೋಹ ಮಾಡಲಾರರು, ಚುನಾವಣೆ ಸ್ಪರ್ಧೆ ಒಂದೆ ಅಲ್ಲ ಪಕ್ಷದಲ್ಲಿ ಬೇರೆ ಬೇರೆ ಮಜಲುಗಳಲ್ಲಿ ಅಧಿಕಾರಿ ಪಡೆಯಲು ಸಾಧ್ಯವಿದೆ. ಇಲ್ಲಿ ಅನ್ಯಾಯವಾಗಿದ್ದರೆ ಅಂಥವರಿಗೆ ಅದರಲ್ಲಿ ಅವಕಾಶ ಕಲ್ಪಿಸಲಾಗುವುದು ಎಂದರು. ಬಂಡಾಯ ಅಭ್ಯರ್ಥಿಗಳ ಮನವೊಲಿಸಲಾಗುವುದು ಎಂದರು.
15ಕ್ಕೂ ಅಧಿಕ ಸೀಟ್ ಬಿಜೆಪಿಗೆ: ನಡೆಯಲಿರುವ ಪುರಸಭೆ ಚುನಾವಣೆಯಲ್ಲಿ 23 ಸೀಟುಗಳ ಪೈಕಿ 15ಕ್ಕೂ ಅಧಿಕ ಸೀಟು ಬಿಜೆಪಿ ಬೆಂಬಲಿತರು ಪಡೆಯಲಿದ್ದಾರೆ. ಕಳೆದ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ ನೀಡಿದ ಭರವಸೆಯ ಮಾತನ್ನು ನಂಬಿದ ಜನ ಅವರಿಗೆ 12 ಸ್ಥಾನವನ್ನು ಗೆಲ್ಲಿಸಿ ಕೊಟ್ಟಿದ್ದರು. ಆದರೆ ಅವರ ಭರವಸೆ ಈಡೇರಿಸುವಲ್ಲಿ ಸೊರೆಕೆ ಎಡವಿದ್ದಾರೆ, ಜನರಿಗೆ ಬೇಡವಾದ ಪ್ರಾಧಿಕಾರವನ್ನು ಪುರಸಭಾ ವ್ಯಾಪ್ತಿಗೆ ತಂದು ಜನರನ್ನು ಸಂಕಷ್ಟಕ್ಕೆ ತಳ್ಳಿದ್ದಾರೆ. ಈ ಎಲ್ಲಾ ಜನರ ಸಮಸ್ಯೆಗಳಿಗೆ ಬಿಜೆಪಿ ಪರಿಹಾರ ಕಂಡುಕೊಳ್ಳಲಿದೆ ಎಂದರು.
ಈ ಸಂದರ್ಭ ಕಾಪು ಶಾಸಕ ಲಾಲಾಜಿ ಮೆಂಡನ್, ಬಿಜೆಪಿ ಮುಖಂಡರಾದ ಯಶ್ ಪಾಲ್ ಸುವರ್ಣ, ಉದಯ ಕುಮಾರ್ ಶೆಟ್ಟಿ, ಶ್ರೀಕಾಂತ್ ನಾಯಕ್, ನವೀನ್ ಶೆಟ್ಟಿ ಕುತ್ಯಾರು, ರತ್ನಾಕರ್ ಹೆಗ್ಡೆ ಮೊದಲಾದವರಿದ್ದರು.
ವರದಿ:ಸುರೇಶ್ ಎರ್ಮಾಳ್