ಕಾಬೂಲಿನ ಮಿಲಿಟರಿ ಏರ್ ಬೇಸ್ ನಲ್ಲಿ ಉದ್ಯೋಗದಲ್ಲಿದ್ದ ಮಂಗಳೂರು ಮೂಲದ ನಾಲ್ಕು ಮಂದಿ ಸುರಕ್ಷಿತವಾಗಿ ಮನೆಗೆ

ಅಫ್ಘಾನಿಸ್ತಾನದ ರಾಜಧಾನಿ ಕಾಬೂಲಿನ ಮಿಲಿಟರಿ ಏರ್ ಬೇಸ್ ನಲ್ಲಿ ಉದ್ಯೋಗದಲ್ಲಿದ್ದ ಮಂಗಳೂರು ಮೂಲದ ನಾಲ್ಕು ಮಂದಿ ಸುರಕ್ಷಿತವಾಗಿ ಮನೆ ಸೇರಿದ್ದಾರೆ.

ಕಾಬೂಲಿನ ನ್ಯಾಟೋ ಏರ್ ಬೇಸ್ ನಲ್ಲಿ ಕೆಲಸಕ್ಕಿದ್ದ ನಾಲ್ವರನ್ನು ಅಮೆರಿಕದ ವಾಯುಪಡೆ ಆಗಸ್ಟ್ 17 ರಂದು ಕತಾರ್ ಗೆ ಏರ್ ಲಿಫ್ಟ್ ಮಾಡಿತ್ತು. ಅಲ್ಲಿಂದ ಭಾರತದ ವಾಯುಪಡೆ ವಿಮಾನ ಭಾನುವಾರ ದೆಹಲಿಗೆ ಕರೆತಂದಿತ್ತು.

ದೆಹಲಿಯಿಂದ ತೊಕ್ಕೊಟ್ಟು ಕೊಲ್ಯ ನಿವಾಸಿ ಪ್ರಸಾದ್ ಆನಂದ್ ಸೋಮವಾರ ಬೆಳಗ್ಗೆ ಮನೆ ಸೇರಿದ್ದರೆ, ನಾಲ್ಕು ಮಂದಿ ಸೋಮವಾರ ರಾತ್ರಿ ಮಂಗಳೂರು ವಿಮಾನ ನಿಲ್ದಾಣ ತಲುಪಿದ್ದಾರೆ. ಮೂಡುಬಿದ್ರೆಯ ಜಗದೀಶ ಪೂಜಾರಿ, ಬಜ್ಪೆಯ ದಿನೇಶ್ ರೈ, ಕಿನ್ನಿಗೋಳಿ ಪಕ್ಷಿಕೆರೆಯ ಡೆಸ್ಮಂಡ್ ಡೇವಿಡ್ ಡಿಸೋಜ, ಮಂಗಳೂರು ಉರ್ವಾದ ಶ್ರವಣ್ ಅಂಚನ್ ಮಂಗಳೂರು ವಿಮಾನ ನಿಲ್ದಾಣಕ್ಕೆ ಬಂದಿದ್ದಾರೆ.

ದೆಹಲಿಯಿಂದ ಕಳೆದ ರಾತ್ರಿ 8.30 ಕ್ಕೆ ಆಗಮಿಸಿದ ವಿಮಾನದಲ್ಲಿ ಸುರಕ್ಷಿತವಾಗಿ ತಾಯ್ನಾಡು ತಲುಪಿದ್ದಾರೆ. ಇವೆರೆಲ್ಲ 2011 ರಲ್ಲಿ ಉದ್ಯೋಗಕ್ಕೆಂದು ಕಾಬೂಲ್ ಮಿಲಿಟರಿ ಬೇಸ್ ಗೆ ತೆರಳಿದ್ದರು. ದಿನೇಶ್ ರೈ ಮೆಕ್ಯಾನಿಕ್ ಆಗಿದ್ದರೆ, ಇತರರು ಬೇರೆ ಬೇರೆ ಉದ್ಯೋಗದಲ್ಲಿದ್ದರು.

ಜುಲೈ 17 ರಂದು ನಮ್ಮನ್ನು ಕತಾರ್ ಏರ್ಪೋರ್ಟ್ ಗೆ ಏರ್ ಲಿಫ್ಟ್ ಮಾಡಲಾಗಿತ್ತು. ನ್ಯಾಟೋ ಏರ್ ಬೇಸ್ ನಲ್ಲಿ ನಮಗೆ ಯಾವುದೇ ತೊಂದರೆ ಇರಲಿಲ್ಲ. ಹೊರಗೆ ತಾಲಿಬಾನಿಗಳಿಂದ ಗುಂಡಿನ ದಾಳಿಯ ಶಬ್ದ ಕೇಳಿಬರುತ್ತಿತ್ತು. ಒಳಗಡೆ ಇದ್ದವರಿಗೆ ತೊಂದರೆ ಇರಲಿಲ್ಲ. ತುಂಬ ಸುರಕ್ಷಿತವಾಗಿದ್ದೆವು‌. ಅಮೆರಿಕದ ಪಡೆ ಕತಾರ್ ಗೆ ಒಯ್ದು ಉಳಿಸಿಕೊಂಡಿತ್ತು. ಅಲ್ಲಿಂದ ಭಾರತದ ವಾಯುಪಡೆ ಪರಿಶೀಲನೆ ನಡೆಸಿ, ದೆಹಲಿಗೆ ಕರೆತಂದಿದೆ. ನಾವು ಅಮೆರಿಕ ಮತ್ತು ಭಾರತದ ವಾಯುಪಡೆಗೆ ಧನ್ಯವಾದ ಹೇಳುತ್ತೇವೆ ಎಂದು ಡೆಸ್ಮಂಡ್ ಡಿಸೋಜ ಹೇಳಿದ್ದಾರೆ.

ಈ ಪೈಕಿ ದಿನೇಶ್ ರೈ, ಕಾಬೂಲ್ ಏರ್ಪೋರ್ಟ್ ನಲ್ಲಿ ಜನ ಮುತ್ತಿಗೆ ಹಾಕಿದ್ದು ಸಿಕ್ಕ ಸಿಕ್ಕ ವಿಮಾನದಲ್ಲಿ ಹತ್ತಿ ನೆಲಕ್ಕೆ ಬಿದ್ದಿರುವುದನ್ನು ನೋಡಿದ್ದರಂತೆ. ತಾಲಿಬಾನ್ ಪಡೆಗಳ ಅಟ್ಟಹಾಸದ ಬಗ್ಗೆ ಭಯ ಬಿದ್ದು ಅಲ್ಲಿನ ಜನರು ಬೇರೆ ಕಡೆಗೆ ತೆರಳಲು ಯತ್ನಿಸುತ್ತಿದ್ದರು ಎಂದು ಸ್ಮರಿಸಿದ್ದಾರೆ.

Related Posts

Leave a Reply

Your email address will not be published.