ಕಾರಿಂಜ ಮಹತೋಭಾರ ಶ್ರೀ ಕಾರಿಂಜೇಶ್ವರ ದೇವಸ್ಥಾನದಲ್ಲಿ ತೆನೆ ಹಬ್ಬ
ಬಂಟ್ವಾಳದ ಕಾವಳಮೂಡೂರು ಗ್ರಾಮದ ಕಾರಿಂಜ ಮಹತೋಭಾರ ಶ್ರೀ ಕಾರಿಂಜೇಶ್ವರ ದೇವಸ್ಥಾನದಲ್ಲಿ ತೆನೆ ಹಬ್ಬ ಆಚರಣೆ ಸಂಪನ್ನಗೊಂಡಿತು. ಪ್ರತಿ ವರ್ಷ ಕನ್ಯಾ ಸಂಕ್ರಮಣದ ಮರು ದಿವಸ ನಡೆಯುವ ತೆನೆ ಹಬ್ಬ ಆಚರಣೆಗಾಗಿ ಕಾರಿಂಜದಿಂದ ಸುಮಾರು 9ಕಿ.ಮೀ. ದೂರವಿರುವ ಸರಪಾಡಿ ಹಲ್ಲಂಗಾರು ಗದ್ದೆಯೊಂದರಿಂದ ತೆನೆಗಳನ್ನು ತರಲಾಗುತ್ತಿದ್ದು, ಈ ಬಾರಿಯೂ ಸಂಪ್ರದಾಯದಂತೆ ನೆರವೇರಿಸಲಾಯಿತು. ಸೂರ್ಯೋದಯದ ಮುಂಚೆ ಶ್ರೀ ಕ್ಷೇತ್ರ ಕಾರಿಂಜದಿಂದ ವಾದ್ಯ ವೃಂದ ಸಹಿತ ಅರ್ಚಕರು, ತಂತ್ರಿಗಳು, ಗ್ರಾಮಣಿಗಳು, ಮುಖ್ಯಸ್ಥರು ಕಾಲ್ನಡಿಗೆಯಲ್ಲಿ ಮೆರವಣಿಗೆ ನಡೆದು, ದೇವರಿಗೆ ಪೂಜೆ ನಡೆಸಿ, ಪ್ರಸಾದ ವಿತರಿಸಲಾಯಿತು. ಕೊನೆಯ ಹಲ್ಲಂಗಾರು ಕಟ್ಟೆಯನ್ನು ಈಶ್ವರ ಸನ್ನಿಧಿ ಎಂದು ಪರಿಗಣಿಸಿ ದರ್ಶನ ಬಲಿ ಸಹಿತ ಪೂಜೆ ನಡೆಯಿತು. ಬಳಿಕ ಸಮೀಪದಲ್ಲಿ ಬಂಗಾರದ ತೆನೆ ಬೆಳೆಯಿತೆನ್ನಲಾದ ಕಂಬಳದ ಗದ್ದೆಯಿಂದ ತೆನೆ ತಂದು ಹೊಸ ವಸ್ತ್ರದಲ್ಲಿ ಹೊದಿಸಿ ಸಮರ್ಪಿಸಲಾಯಿತು. ಅನಂತರ ಶ್ರೀ ಕ್ಷೇತ್ರ ಕಾರಿಂಜಕ್ಕೆ ತಂದು ಲಕ್ಷ್ಮೀ ಪೂಜೆ ನಡೆಸಿ ದೇವಸ್ಥಾನಕ್ಕೆ ತೆನೆ ಕಟ್ಟಲಾಯಿತು. ಶ್ರೀ ಕಾರಿಂಜೇಶ್ವರ ದೇವಸ್ಥಾನಕ್ಕೆ ಪವಿತ್ರ ತೆನೆ ತಂದು ಮನೆ ತುಂಬಿಸುವ ಸಂಪ್ರದಾಯ ನಡೆಸಲಾಯಿತು.ಸರಪಾಡಿ, ಮಣಿನಾಲ್ಕೂರು ಗ್ರಾಮಸ್ಥರು ಈ ತೆನೆ ಹಬ್ಬದಲ್ಲಿ ಭಾಗವಹಿಸಿ ತಮ್ಮ ವ್ಯಾಪ್ತಿಯ ಕಟ್ಟೆಗಳಿಂದ ತೆನೆ ಸಂಗ್ರಹಿಸಿ ಮನೆ ತುಂಬಿಸಿ ಹೊಸ ಅಕ್ಕಿ ಊಟ ಮಾಡಿದರು. ಶ್ರೀ ಶರಭೇಶ್ವರ ದೇವಸ್ಥಾನದಲ್ಲಿಯೂ ತೆನೆ ವಿತರಿಸಲಾಯಿತು.