ಕುಬಣೂರಿನ ಸೇತುವೆಯ ಒಂದು ಭಾಗ ಕುಸಿದು ಸಂಚಾರಕ್ಕೆ ತಡೆ
ಮಂಜೇಶ್ವರ: ಮಂಗಲ್ಪಾಡಿ ಗ್ರಾ.ಪಂ. ವ್ಯಾಪ್ತಿಯಲ್ಲಿರುವ ಕುಬಣೂರಿನಲ್ಲಿ 30 ವರ್ಷಗಳ ಹಿಂದೆ ನಿರ್ಮಿಸಲಾಗಿದ್ದ ಸೇತುವೆಯ ಒಂದು ಭಾಗ ಕುಸಿದು ಸಂಚಾರಕ್ಕೆ ತಡೆಯಾಗಿದ್ದು ನಿತ್ಯ ಸಂಚಾರಿಗಳು ಸಂಕಷ್ಟಕ್ಕೂಳಗಾಗಿದ್ದಾರೆ.
ಇದು ಸುವರ್ಣಗಿರಿ ತೋಡಿಗೆ ಕೃಷಿಗಾಗಿ ನಿರ್ಮಿಸಲಾದ ಸೇತುವೆಯಾಗಿದ್ದು ಅಗಲ ಕಿರಿದಾಗಿ ಸುಗಮ ಸಂಚಾರಕ್ಕೂ ಅಡ್ಡಿಯಾಗಿತ್ತು. ಇದರ ಮೇಲೆ ಕೆಂಪು ಕಲ್ಲು ಹಾಗೂ ಜಲ್ಲಿ ಕಲ್ಲು ಮಾಫಿಯಾಗಳು ಲಾರಿಗಳಲ್ಲಿ ಅಧಿಕ ಭಾರಗಳನ್ನು ಹೇರಿ ಸಾಗಾಟ ನಡೆಸುತಿದ್ದದ್ದು ಸೇತುವೆ ಕುಸಿಯಲು ಕಾರಣವೆಂಬುದಾಗಿ ಸ್ಥಳೀಯರು ಆರೋಪಿಸಿದ್ದಾರೆ. ಈ ಸೇತುವೆ ಬಂದ್ಯೋಡ್ -ಪೆರ್ಮುದೆ ರಸ್ತೆಯ ಕುಬಣೂರಿನಿಂದ ಮತ್ತು ಪಚ್ಚಂಬಳದಿಂದ ಬೇಕೂರು ಶಾಂತಿಗುರಿಯ ಮೂಲಕ ಕೈಕಂಬ ಬಾಯಾರು ರಸ್ತೆಯನ್ನು ಸಂಪರ್ಕಿಸುತ್ತದೆ.
ಶಾಸಕರು ಹಾಗೂ ಗ್ರಾಮ ಪಂಚಾಯತು ಚುನಾಯಿತರು ಕುಸಿದ ಸೇತುವೆಯನ್ನು ಪರಿಶೀಲಿಸಿ ಭರವಸೆ ನೀಡಿ ಪೆÇೀಟೋ ಕ್ಲಿಕ್ಕಿಸಿ ಹೋದವರು ಮತ್ತೆ ತಿರುಗಿ ನೋಡಲಿಲ್ಲವೆಂಬುದಾಗಿ ಸ್ಥಳೀಯರು ಆರೋಪಿಸಿದ್ದಾರೆ.