ಕೇರಳ ಗಡಿಭಾಗದಿಂದ ಬರುವವರ ಮೇಲೆ ನಿಗಾ ಇರಿಸಿ: ಮಂಡೆಕೋಲಿನಲ್ಲಿ ಸಚಿವ ಎಸ್ ಅಂಗಾರ
ಸುಳ್ಯ: ಕೇರಳದಿಂದ ಕರ್ನಾಟಕಕ್ಕೆ ಬರುವವರು ಚೆಕ್ಪೋಸ್ಟ್ ಬಿಟ್ಟು ಇತರ ಕಾಲುದಾರಿಗಳಲ್ಲಿ ಆಗಮಿಸುತ್ತಿದ್ದು, ಇಂತವರ ಮೇಲೆ ಹೆಚ್ಚು ನಿಗಾ ಇರಿಸಬೇಕೆಂದು ಸಚಿವ ಎಸ್ ಅಂಗಾರ ತಿಳಿಸಿದ್ದಾರೆ.
ಅವರು ಮಂಡೆಕೋಲು ಗ್ರಾಮದಲ್ಲಿ ಕೋವಿಡ್ ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ತುರ್ತು ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು. ಇತರ ತಾಲೂಕುಗಳೊಂದಿಗೆ ಸುಳ್ಯವನ್ನು ಹೋಲಿಸಿದರೆ, ಸುಳ್ಯದಲ್ಲಿ ಕೋವಿಡ್ ಪಾಸಿಟಿವಿಟಿ ದರ ಹೆಚ್ಚಾಗಿದ್ದು ಇದಕ್ಕೆ ಇಲ್ಲಿನ ಜನರು ನೆರೆಯ ಕಾಸರಗೋಡು ಜಿಲ್ಲೆಯನ್ನು ದೈನಂದಿನ ವ್ಯವಹಾರಕ್ಕೆ ಪರಸ್ಪರ ಅವಲಂಬಿಸಿರುವುದೇ ಕಾರಣ. ಗಡಿ ಪ್ರದೇಶವಾದ ಮಂಡೆಕೋಲು, ಆಲೆಟ್ಟಿ ಮುಂತಾದೆಡೆ ಇದು ಅನಿವಾರ್ಯವಾಗಿದ್ದರೂ ಕೇರಳದಿಂದ ಬರುವವರು ಕೋವಿಡ್ ನೆಗೆಟಿವ್ ವರದಿ ಸಲ್ಲಿಕೆ ಮಾಡುವುದು ಕಡ್ಡಾಯ. ಇದೀಗ ಚೆಕ್ಪೋಸ್ಟ್ ಬಿಟ್ಟು ಇತರ ಕಾಲುದಾರಿಗಳಲ್ಲಿ ಬರುವವರು ಹೆಚ್ಚಾಗಿದ್ದು ಇಂತವರಲ್ಲಿ ಸೋಂಕು ಇರುವ ಸಾಧ್ಯತೆ ಇರುವ ಕಾರಣ ಅವರ ಮೇಲೆ ಹೆಚ್ಚು ನಿಗಾ ಇರಿಸಬೇಕು ಎಂದರು.
ತಹಶೀಲ್ದಾರ್ ಅನಿತಾಲಕ್ಷ್ಮೀ ಮಾತನಾಡಿ ಆರೋಗ್ಯ ಕಾರ್ಯಕರ್ತರು ಸೋಂಕಿತ ವ್ಯಕ್ತಿಗಳ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕಿತರ ಮೇಲೆ ಹೆಚ್ಚು ನಿಗಾವಹಿಸಿ ಅವರನ್ನು ಪರೀಕ್ಷೆಗೆ ಒಳಪಡುವಂತೆ ಮಾಡಬೇಕು. ಸಂಪರ್ಕಿತರಿಗೆ ಸೋಂಕು ಇದ್ದು ಅಂತವರು ಹೊರಗಡೆ ತಿರುಗಾಟ ನಡೆಸಿದರೆ ಅವರಿಂದ ಇತರರಿಗೂ ಸೋಂಕು ಹರಡಿ ಸೋಂಕಿತರ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇರುವುದರಿಂದ ಈ ಬಗ್ಗೆ ಹೆಚ್ಚು ಜಾಗರೂಕತೆ ವಹಿಸಬೇಕು ಎಂದರು.
ಮಂಡೆಕೋಲು ಗ್ರಾಮ ಪಂಚಾಯಿತಿ ಅಧ್ಯಕ್ಷೆ ವಿನುತಾ ಪಾತಿಕಲ್ಲು, ಉಪಾಧ್ಯಕ್ಷ ಅನಿಲ್ ತೋಟಪ್ಪಾಡಿ ಹಾಗೂ ಮಂಡೆಕೋಲು ಸಹಕಾರಿ ಸಂಘದ ಅಧ್ಯಕ್ಷ ರಾಮಕೃಷ್ಣ ರೈ ವೇದಿಕೆಯಲ್ಲಿ ಉಪಸ್ಥಿತರಿದ್ದರು.