ಕೋರಮಂಗಲದಲ್ಲಿ ಭೀಕರ ಅಪಘಾತ: ಏಳು ಮಂದಿ ಮೃತ್ಯು
ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಕಾರೊಂದು ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದ ಪರಿಣಾಮ ತಮಿಳುನಾಡಿನ ಹೊಸೂರು ಶಾಸಕ ವೈ ಪ್ರಕಾಶ್ ಅವರ ಪುತ್ರ, ಭಾವಿ ಸೊಸೆ ಸಹಿತ ಏಳು ಮಂದಿ ಮೃತಪಟ್ಟಿರುವ ದುರ್ಘಟನೆ ತಡರಾತ್ರಿ 1:30ರ ಸುಮಾರಿಗೆ ನಡೆದಿದೆ.
ಹೊಸೂರು ಶಾಸಕ ವೈ.ಪ್ರಕಾಶ್ ಅವರ ಪುತ್ರ ಕರುಣಾಸಾಗರ್, ಭಾವಿ ಸೊಸೆ ಬಿಂದೂ(28), ಕೇರಳ ಮೂಲದ ಅಕ್ಷಯ್ ಗೋಯಲ್, ಇಶಿತಾ(21), ಧನುಷಾ(21), ಹುಬ್ಬಳ್ಳಿಯ ರೋಹಿತ್ ಹಾಗೂ ಹರ್ಯಾಣ ಮೂಲದ ಉತ್ಸವ್ ಮೃತಪಟ್ಟವರು ಎಂದುಪೊಲೀಸ್ರು ತಿಳಿಸಿದ್ದಾರೆ.
ತಡರಾತ್ರಿ ರಾತ್ರಿ 1:30ರ ಸುಮಾರಿಗೆ ಕೋರಮಂಗಲದ ಮಂಗಳ ಕಲ್ಯಾಣ ಮಂಟಪದ ಬಳಿ ಈ ಭೀಕರ ದುರಂತ ಸಂಭವಿಸಿದೆ. ಚಾಲಕನ ನಿಯಂತ್ರಣ ತಪ್ಪಿದ ಐಷಾರಾಮಿ ಆಡಿ ಕ್ಯೂ3 ಕಾರು ವಿದ್ಯುತ್ ಕಂಬಕ್ಕೆ ಢಿಕ್ಕಿಯಾದ ಪರಿಣಾಮ ಕಾರಿನಲ್ಲಿದ್ದ ಮೂವರು ಮಹಿಳೆಯರು ನಾಲ್ವರು ಪುರುಷರು ಮೃತಪಟ್ಟಿದ್ದಾರೆ ಎನ್ನಲಾಗಿದೆ.
ಸಂಚಾರ ವಿಭಾಗದ ಜಂಟಿ ಆಯುಕ್ತ ಡಾ.ಬಿ.ಆರ್.ರವಿಕಾಂತೇಗೌಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ತಡರಾತ್ರಿ 1:45ರಿಂದ 2 ಗಂಟೆ ಸುಮಾರಿಗೆ ಈ ಅಪಘಾತ ನಡೆದಿದೆ. ಅಪಘಾತದ ತೀವ್ರತೆಗೆ ಕಾರಿನಲ್ಲಿದ್ದ 7 ಜನರೂ ಮೃತಪಟ್ಟಿದ್ದಾರೆ. 6 ಜನರು ಸ್ಥಳದಲ್ಲೇ ಮೃತಪಟ್ಟಿದ್ದು, ಒಬ್ಬರು ಆಸ್ಪತ್ರೆಗೆ ದಾಖಲಿಸಿದ ವೇಳೆ ಕೊನೆಯುಸಿರೆಳೆದಿದ್ದಾರೆ ಎಂದರು.ಈ ಸಂಬಂಧ ಆಡುಗೋಡಿ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.