ಕೋವಿಡ್ ನಿಯಮಗಳನ್ನು ಪಾಲಿಸಿಕೊಂಡು ಶಾಲೆಗಳನ್ನು ತೆರೆಯಬೇಕು : ದ. ಕ. ಜಿಲ್ಲಾಧಿಕಾರಿ ಡಾ. ರಾಜೇಂದ್ರ .ಕೆ.ವಿ

ಜಿಲ್ಲೆಯಲ್ಲಿ ಕೋವಿಡ್ ನಿಯಮಗಳನ್ನು ಪಾಲಿಸಿಕೊಂಡು ಶಾಲೆಗಳನ್ನು ತೆರೆಯಬೇಕು ಹಾಗೂ ಮಕ್ಕಳಿಗೆ ತೊಂದರೆಯಾಗದಂತೆ ಸಂಬಂಧಿಸಿದ ಅಧಿಕಾರಿಗಳು ನೋಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಡಾ. ರಾಜೇಂದ್ರ.ಕೆ.ವಿ ಅವರು ಸೂಚಿಸಿದ್ದಾರೆ.ಅವರು ಸೋಮವಾರದಂದು ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲೆಯಲ್ಲಿ ಶಾಲೆಗಳನ್ನು ತೆರೆಯುವ ಬಗ್ಗೆ ಹಮ್ಮಿಕೊಳ್ಳಲಾಗಿದ್ದ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿ ಸೆಪ್ಟೆಂಬರ್ 17ರಂದು 8,9 ಮತ್ತು 10 ನೇ ತರಗತಿಗಳನ್ನು ಆರಂಭಿಸಿ, ಸೆಪ್ಟೆಂಬರ್ 20 ರಂದು 6 ಮತ್ತು 7ನೇ ತರಗತಿಗಳನ್ನು ಆರಂಭಿಸಲು ಸೂಚಿಸಿದರು. ಜೊತೆಗೆ ಎಲ್ಲಾ ಪ್ರಥಮ ಪಿ.ಯು.ಸಿ ತರಗತಿಗಳನ್ನು ಆರಂಭಿಸಲು ತಿಳಿಸಿದರು.

ಜಿಲ್ಲೆಯಲ್ಲಿ ಈಗಾಗಲೇ ಶೇ.99 ರಷ್ಟು ಶಾಲಾ ಶಿಕ್ಷಕರು ಮತ್ತು ಶಾಲಾ ಸಿಬ್ಬಂದಿಗಳಿಗೆ ಲಸಿಕೆಯನ್ನು ನೀಡಲಾಗಿದ್ದು, ಕೋವಿಡ್ ಪರೀಕ್ಷೆಗಳನ್ನು ಹೆಚ್ಚಾಗಿ ನಡೆಸಬೇಕು ಎಂದರು. ಜಿಲ್ಲೆಯಲ್ಲಿ ಈಗಾಗಲೇ 261 ಮಕ್ಕಳು ಕೋವಿಡ್ ಚಿಕಿತ್ಸೆ ಪಡೆಯುತ್ತಿದ್ದೂ, ಮಕ್ಕಳಲ್ಲಿ ಕೋವಿಡ್ ಲಕ್ಷಣಗಳು ಕಂಡುಬಂದಲ್ಲಿ ಅಂತವರಿಗೆ ಸೂಕ್ತ ಚಿಕಿತ್ಸೆ ನೀಡಬೇಕು ಹಾಗೂ ಪ್ರಾಥಮಿಕ ಸಂಪರ್ಕದಲ್ಲಿದ್ದವರನ್ನು ಕಂಡುಹಿಡಿದು ಚಿಕಿತ್ಸೆ ನೀಡುವಂತೆ ಸಂಬಂಧಪಟ್ಟ ಅಧಿಕಾರಿಗಳು ಗಮನಹರಿಸಬೇಕು ಎಂದರು.

ಶಾಲೆಗಳು ಆರಂಭವಾದ ನಂತರ ವಿದ್ಯಾರ್ಥಿಗಳು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು ಹಾಗೂ ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳುವಂತೆ ಶಿಕ್ಷಕರು ಸೂಕ್ತ ಮಾಹಿತಿಯನ್ನು ನೀಡಬೇಕು, ಶಾಲೆಗಳು ಆರಂಭವಾದ ನಂತರ ಮಕ್ಕಳಲ್ಲಿ ಶುಲ್ಕ ಪಾವತಿಸಲು ಒತ್ತಾಯಿಸಬಾರದು,  ಶಾಲೆಗಳಲ್ಲಿ ಶೌಚಾಲಯ ವ್ಯವಸ್ಥೆ ಹಾಗೂ ಮೂಲಭೂತ ಸೌಕರ್ಯಗಳನ್ನು ಶಾಲೆಯ ಮುಖ್ಯಸ್ಥರು ಒದಗಿಸಬೇಕು ಎಂದರು.

ಶಾಲೆಗಳು ಆರಂಭವಾದ ಬಳಿಕ ಭೌತಿಕ ತರಗತಿಗಳ ಜೊತೆಗೆ ಆನ್‍ಲೈನ್ ತರಗತಿಗಳನ್ನು ಕೂಡ ಮುಂದುವರೆಸಬೇಕು. ಭೌತಿಕ ತರಗತಿಗಳಿಗೆ ಹಾಜರಾಗುವ ಸಂಬಂಧ ಪೋಷಕರ ಅನುಮತಿಯನ್ನು ಕಡ್ಡಾಯವಾಗಿ ತೆಗೆದುಕೊಳ್ಳಬೇಕು, ಕಾಲಕಾಲಕ್ಕೆ ಶಿಕ್ಷಕರ ಹಾಗೂ ಶಾಲಾ ಸಿಬ್ಬಂದಿಗಳ ಕೋವಿಡ್ ಪರೀಕ್ಷೆಗಳನ್ನು ನಡೆಸಬೇಕು. ವಿದ್ಯಾರ್ಥಿಗಳ ಕುಟುಂಬದವರ ಆರೋಗ್ಯವನ್ನು ಆಯಾ ಶಿಕ್ಷಣ ಸಂಸ್ಥೆಯು ಗಮನಿಸಬೇಕು ಹಾಗೂ ಅವರಲ್ಲಿ ಕೋವಿಡ್ ಲಕ್ಷಣ ಇಲ್ಲದಿರುವ ಕುರಿತು ಖಾತ್ರಿ ಪಡಿಸಿಕೊಳ್ಳಬೇಕು ಎಂದರು.

ಕೇರಳದಿಂದ ಬರುವ ಮಕ್ಕಳಿಗೆ ವಿದ್ಯಾರ್ಥಿನಿಲಯಗಳಲ್ಲಿ ಉಳಿದುಕೊಳ್ಳುವಂತೆ ನೋಡಿಕೊಳ್ಳಬೇಕು. ಇಲ್ಲದಿದ್ದಲ್ಲಿ ಆನ್‍ಲೈನ್ ಮೂಲಕ ತರಗತಿಗಳನ್ನು ತೆಗೆದುಕೊಳ್ಳಬೇಕೆಂದು ತಿಳಿಸಿದರು.ಅಪರ ಜಿಲ್ಲಾಧಿಕಾರಿ ಎನ್.ಮಾಣಿಕ್ಯ(ಪ್ರಭಾರ), ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಮಲ್ಲೇಸ್ವಾಮಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಕಿಶೋರ್, ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಜಯಣ್ಣ, ಖಾಸಗಿ ಶಾಲಾ ಅಸೋಷಿಯೇಶನ್‍ನ ಮುಖ್ಯಸ್ಥರು, ಜಿಲ್ಲೆಯ ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಇತರ ಇಲಾಖಾಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

Related Posts

Leave a Reply

Your email address will not be published.