ಕೋವಿಡ್ ಪ್ಯಾಕೇಜ್‌ಗೆ ಆಗ್ರಹಿಸಿ ಜನಾಗ್ರಹ ಆಂದೋಲನ

ಸಮಗ್ರ ಪ್ಯಾಕೇಜ್ ಮತ್ತು ತುರ್ತು ಕ್ರಮಗಳಿಗಾಗಿ ಒತ್ತಾಯಿಸಿ ಉಸ್ತುವಾರಿ ಮಂತ್ರಿ ಮತ್ತು ಶಾಸಕರುಗಳ ಕಛೇರಿ ಎದುರು ಖಾಲಿ ಚೀಲಗಳನ್ನು ಸುಟ್ಟು ಇಂದು ಜನಾಗ್ರಹ ಆಂದೋಲನವು ಹಮ್ಮಿಕೊಂಡಿದ್ದ ರಾಜ್ಯವ್ಯಾಪಿ ಪ್ರತಿಭಟನೆಯ ಭಾಗವಾಗಿ ಮಂಗಳೂರಿನ ದ.ಕ. ಜಿಲ್ಲಾ ಉಸ್ತುವಾರಿ ಸಚಿವರ ಕಚೇರಿ ಬಳಿ ಹಮ್ಮಿಕೊಂಡಿದ್ದ ಪ್ರತಿಭಟನೆಗೆ ಮಂಗಳೂರು ಪೋಲಿಸರು ಮೊದಲಿಗೆ ಅನುಮತಿ ನಿರಾಕರಿಸಿದರೂ, ಸಂಸದರು ಮತ್ತು ಶಾಸಕರನ್ನು ಜಿಲ್ಲಾಧಿಕಾರಿ ಕಚೇರಿಯಲ್ಲಿ ಭೇಟಿ ಮಾಡಿಸುವ ವ್ಯವಸ್ಥೆ ಕಲ್ಪಿಸುವುದರ ಮೂಲಕ ಪ್ರತಿಭಟನೆಗೆ ಹೊಸರೂಪವನ್ನು ನೀಡಿ ಸಹಕರಿಸಿದ ಘಟನೆ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ನಡೆಯಿತು.

ಪ್ರತಿಭಟನಾಕಾರರು ಮಂಗಳೂರು ಸಂಸದ ನಳಿನ್ ಕುಮಾರ್ ಕಟೀಲ್, ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್, ಮಂಗಳೂರು ಶಾಸಕ ಯು.ಟಿ. ಖಾದರ್ ಮತ್ತು ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ ಕಾಮತ್‍ರಿಗೆ ಮನವಿ ಸಲ್ಲಿಸಿ, ಸಮಗ್ರ ಪ್ಯಾಕೇಜ್ ಘೋಷಿಸುವಂತೆ ಸರಕಾರದ ಮೇಲೆ ಒತ್ತಡ ಹೇರಲು ಆಗ್ರಹಿಸಿದರು. ಜನಾಗ್ರಹ ಆಂದೋಲನ ದ.ಕ. ಜಿಲ್ಲಾ ಸಂಯೋಜಕ ಉಮರ್ ಯು.ಹೆಚ್. ಮಾತನಾಡಿ, ಕುಟುಂಬಗಳು ಕುಸಿದು ಕೂತಿವೆ. ಬಂಧುಗಳನ್ನು ಕಳೆದುಕೊಂಡ ಕುಟುಂಬಗಳು ಕಣ್ಣೀರಿನಲ್ಲಿ ಮುಳುಗಿವೆ. ಆರ್ಥಿಕತೆ ನೆಲಕಚ್ಚಿದೆ. ಅನೇಕ ಜಿಲ್ಲೆಗಳಲ್ಲಿ ಲಾಕ್‍ಡೌನ್ ಮುಂದುವರಿಯುತ್ತಿದೆ. ದುಡಿಮೆಗಳು ಪ್ರಾರಂಭವಾಗುವ, ಪರಿಸ್ಥಿತಿ ಸುಧಾರಿಸುವ ಮಾತು ದೂರವಿದೆ. ಅಲ್ಲದೆ ಮೂರನೇ ಅಲೆಯ ಕತ್ತಿ ನೆತ್ತಿಯ ಮೇಲೆ ತೂಗುತ್ತಿದೆ. ಇದೊಂದು ಅಸಾಮಾನ್ಯ ಪರಿಸ್ಥಿತಿ. ಇದು ಅಸಾಮಾನ್ಯ ಕ್ರಮಗಳನ್ನು ಕೇಳುತ್ತಿದೆ. ಆದ್ದರಿಂದ ಸಂಕಷ್ಟದಲ್ಲಿರುವ ಜನರಿಗೆ ಸಾಂತ್ವನ ನೀಡಲು ಸರ್ಕಾರ ಮುಂದಾಗಬೇಕೆಂದು ಆಗ್ರಹಿಸಿದರು.

‘ಎಲ್ಲಬಡವರಿಗೂ ಆಪತ್ಕಾಲಿಕ ನೆರವು ಕೊಡಿ’, ‘ಲಾಕ್‍ಡೌನ್ ಮಾಡುವುದು ಮಾತ್ರ ಸರಕಾರದ ಕೆಲಸವಲ್ಲ, ಲಾಕ್‍ಆದ ಜನರನ್ನು ಸಲಹುವುದೂ ಸರ್ಕಾರದ ಕರ್ತವ್ಯ’, ‘ಅರೆಬರೆ ಕ್ರಮಗಳು ಸಾಕೇ ಸಾಕು, ಸಮಗ್ರ ಪ್ಯಾಕೇಜ್ ಬೇಕೇಬೇಕು’, ‘ಕೇಂದ್ರ ನೀಡಬೇಕಿರುವ ಬಾಕಿಯನ್ನು ವಸೂಲಿ ಮಾಡಿ, ಬಡವರಿಗೆ ಸಮಗ್ರ ಪ್ಯಾಕೇಜ್ ಬಿಡುಗಡೆ ಮಾಡಿ’, ‘ಎಲ್ಲರಿಗೂ ಉಚಿತ ಕೋವಿಡ್ ಚಿಕಿತ್ಸೆ ಸಿಗಲೇಬೇಕು’, ‘ರೈತರ ಬಿತ್ತನೆಗೆ ವಿಶೇಷ ಸಬ್ಸಿಡಿ ಕೊಡಲೇಬೇಕು’, ‘ಕೋಟ್ಯಾದೀಶರಿಗೆ ಕೋವಿಡ್ ಸುಂಕ ನಿಗದಿ ಮಾಡಿ, ಬಡ ಕುಟುಂಬಗಳಿಗೆ ಸಮಗ್ರ ಪ್ಯಾಕೇಜ್ ಬಿಡುಗಡೆ ಮಾಡಿ’, ‘ಹಸಿದ ಕುಟುಂಬಗಳಿಗೆ ಆಹಾರ ಕಿಟ್ ಕೊಡಿ’, ‘ಅನಾಥ ಕುಟುಂಬಗಳಿಗೆ 5 ಲಕ್ಷ ಪರಿಹಾರ ಕೊಡಿ’, ‘ಸರ್ವರಿಗೂ ತ್ವರಿತ ಉಚಿತ ವ್ಯಾಕ್ಸಿನ್ ವ್ಯವಸ್ಥೆ ಮಾಡಿ’ ಎನ್ನುವ ಬೇಡಿಕೆಗಳ ಪ್ಲೇಕಾರ್ಡ್ ಈ ವೇಳೆ ಪ್ರದರ್ಶಿಸಲಾಯಿತು.

ಮನಪಾ ಮಾಜಿ ಉಪಮೇಯರ್ ಪುರುಷೋತ್ತಮ ಚಿತ್ರಾಪುರ, ಮನಾಪ ಸದಸ್ಯ ಮುನೀಬ್ ಬೆಂಗ್ರೆ, ಎಸ್‍ಡಿಪಿಐ ಮುಖಂಡರಾದ ಅಕ್ರಂ ಹಸನ್ ಉಳ್ಳಾಲ್, ಅನ್ವರ್ ಸಾದಾತ್ ಬಜತ್ತೂರು, ಸುಹೈಲ್ ಖಾನ್, ಆಟೋ ಚಾಲಕರ ಸಂಘದ ಶರೀಫ್ ಪಾಂಡೇಶ್ವರ, ವೆಲ್ಫೇರ್ ಪಾರ್ಟಿಯ ಮುಖಂಡರಾದ ನ್ಯಾಯವಾದಿ ಸರ್ಫರಾಝ್, ಮನ್ಸೂರ್ ಸಿ.ಹೆಚ್. ಪತ್ರಕರ್ತ ನಂದಗೋಪಾಲ್ ಎಸ್., ಕವಿ ಹುಸೈನ್ ಕಾಟಿಪಳ್ಳ, ಝಾಕಿರ್ ಇಕ್ಲಾಸ್, ಹುಸೈನ್ ತೊಕ್ಕೋಟು ಮತ್ತಿತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

Related Posts

Leave a Reply

Your email address will not be published.