ಖಾಲಿಯಾಗುವ ಸಿಎಂ ಹುದ್ದೆಗೆ ದಲಿತ ನಾಯಕನನ್ನು ಆಯ್ಕೆ ಮಾಡಲಿ: ಸಿದ್ದರಾಮಯ್ಯ
ಬಿಜೆಪಿಯಲ್ಲಿ ಮುಖ್ಯಮಂತ್ರಿ ಬದಲಾವಣೆ ಚರ್ಚೆ ನಡೆಯುತ್ತಿದೆ. ಬಿ.ಎಸ್.ಯಡಿಯೂರಪ್ಪ ಶೀಘ್ರ ರಾಜೀನಾಮೆ ನೀಡುವ ಸಾಧ್ಯತೆ ಇದ್ದು, ಬಿಜೆಪಿಯಲ್ಲಿ ಖಾಲಿಯಾಗುವ ಸಿಎಂ ಹುದ್ದೆಗೆ ದಲಿತ ನಾಯಕನನ್ನು ಆಯ್ಕೆ ಮಾಡಲಿ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಅವರಿಗೆ ಸವಾಲು ಹಾಕಿದ್ದಾರೆ.
ಅವರು ಮಂಗಳೂರಿನಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು, ನಳಿನ್ ಕುಮಾರ್ ಕಟೀಲು ಇತ್ತೀಚೆಗೆ ಕಾಂಗ್ರೆಸ್ ದಲಿತ ಸಿಎಂ ಅಭ್ಯರ್ಥಿಯನ್ನು ಘೋಷಿಸಲಿ ಎಂದು ಹೇಳಿದ್ದರು. ಇದೀಗ ಬಿಜೆಪಿಯಲ್ಲಿ ಮುಖ್ಯಮಂತ್ರಿ ಹುದ್ದೆ ಖಾಲಿ ಬೀಳಲಿದೆ. ನಳಿನ್ ನಮಗೆ ಹೇಳುವ ಬದಲು ಅವರೇ ದಲಿತರನ್ನು ಸಿಎಂ ಮಾಡಲಿ ಎಂದು ಒತ್ತಾಯಿಸಿದರು. ಬಿಜೆಪಿ ಭ್ರಷ್ಟ ಪಕ್ಷ, ಅವರದು ಭ್ರಷ್ಟ ಸರಕಾರ. ಯಾರೇ ಮುಖ್ಯಮಂತ್ರಿಯಾದರೂ ಅವರ ಭ್ರಷ್ಟಾಚಾರ ನಿಲ್ಲದು ಎಂದ ಸಿದ್ದರಾಮಯ್ಯ, ಬಿಜೆಪಿಯಲ್ಲಿ ಸಾಮಾಜಿಕ ನ್ಯಾಯ ಎಂಬುದೇ ಇಲ್ಲ ಎಂದು ವ್ಯಂಗ್ಯವಾಡಿದರು.
ಫೋನ್ ಕದ್ದಾಲಿಕೆ ಬಗ್ಗೆ ಪ್ರತಿಕ್ರಿಯಿಸಿದ ಅವರು, ಫೋನ್ ಕದ್ದಾಲಿಕೆ ಇದೇ ಮೊದಲಲ್ಲ, ಬಿಜೆಪಿ ಇದಕ್ಕೂ ಮೊದಲು ಮಾಡಿದೆ. 2019ರಲ್ಲಿ ನನ್ನ ಪಿಎ ವೆಂಕಟೇಶ್ ಫೋನ್ ಕದ್ದಾಲಿಕೆ ಮಾಡಿದ್ದಾರೆ. ಕುಮಾರಸ್ವಾಮಿ, ಡಾ.ಜಿ.ಪರಮೇಶ್ವರ್ ಸೇರಿ ಹಲವರ ಫೋನ್ ಕದ್ದಾಲಿಕೆ ಮಾಡಿದ್ದಾರೆ. ಸಮ್ಮಿಶ್ರ ಸರಕಾರ ಕಿತ್ತು ಹಾಕಲು ಏನು ಬೇಕೋ ಅದೆಲ್ಲಾ ಮಾಡಿದ್ದಾರೆ. ನಾನು ಈ ಬಗ್ಗೆ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಮೂಲಕ ತನಿಖೆಗೆ ಆಗ್ರಹಿಸುತ್ತೇನೆ ಎಂದರು.
ರಾಜ್ಯದಲ್ಲಿ ಪ್ರಕೃತಿ ವಿಕೋಪದಿಂದ ಜನರು ತತ್ತರಿಸಿದ್ದಾರೆ. ಸಂತ್ರಸ್ತರಿಗೆ ಪರಿಹಾರ ಕಲ್ಪಿಸುವ ಬದಲು ಬಿಜೆಪಿಯು ಮುಖ್ಯಮಂತ್ರಿಯ ಬದಲಾವಣೆಯಲ್ಲಿ ತಲ್ಲೀನವಾಗಿದೆ. 2019ರಲ್ಲಿ ಸಂಭವಿಸಿದ ಪ್ರಕೃತಿ ವಿಕೋಪದ ಪರಿಹಾರಧನವನ್ನು ಇನ್ನೂ ಸಂತ್ರಸ್ತರಿಗೆ ನೀಡಿಲ್ಲ. ಇಂತಹ ನಾಲಾಯಕ್ ಸರಕಾರವನ್ನು ಕಿತ್ತೊಗೆಯಬೇಕಿದೆ ಎಂದರು.