ತಸ್ತೀಕ್ ವಿಚಾರದಲ್ಲಿ ರಾಜಕೀಯ ಬೇಡ : ಹರೀಶ್ ಕುಮಾರ್
ತಸ್ತೀಕ್ ಹಣದ ವಿಚಾರದಲ್ಲಿ ರಾಜಕೀಯ ಪ್ರೇರಿತ ಹೇಳಿಕೆ ನೀಡುವ ಮೂಲಕ ಜನರ ಭಾವನಯೊಂದಿಗೆ ಆಟವಾಡುವುದು ಬೇಡ ಎಂದು ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷರು, ವಿಧಾನಪರಿಷತ್ ಸದಸ್ಯರು ಆದ ಕೆ.ಹರೀಶ್ ಕುಮಾರ್ ಹೇಳಿದ್ದಾರೆ.
ಅವರು ಇಂದು ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ತಸ್ತೀಕ್ ಹಣ ನೀಡುವ ವಿಚಾರದಲ್ಲಿ ಸಾರ್ವಜನಿಕವಾಗಿ ಚರ್ಚೆಯಾಗುವ ವಿಚಾರ ಯಾವುದು ಇಲ್ಲ.
ಹಿಂದೂ ಧಾರ್ಮಿಕ ದತ್ತಿ ಇಲಾಖೆಯ ತಸ್ತೀಕ್ ಹಣವನ್ನು ಇನ್ನು ಮುಂದೆ ಹಿಂದೂ ದೇವಸ್ಥಾನಗಳಿಗೆ ಮಾತ್ರ ವಿನಿಯೋಗ ಮಾಡುವಂತೆ ಧಾರ್ಮಿಕ ದತ್ತಿ ಇಲಾಖೆಯ ಆಯುಕ್ತರಿಗೆ ಸೂಚನೆ ನೀಡಲಾಗಿದೆ ಎಂದು ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿರುವುದು ಜನರಲ್ಲಿ ಗೊಂದಲ ಮೂಡಿಸುವ ದುರುದ್ದೇಶ ಹೊಂದಿದೆ ಎಂದು ಹರೀಶ್ ಕುಮಾರ್ ಹೇಳಿದರು.
ಕಾಂಗ್ರೆಸ್ ಸರಕಾರ ಇದ್ದಾಗ ಯಾವತ್ತೂ ಮುಜರಾಯಿ ಇಲಾಖೆಯ ಹಣವನ್ನು ಬೇರೆ ಧರ್ಮದ ಧಾರ್ಮಿಕ ಕೇಂದ್ರಗಲಿಗೆ ನೀಡಿಲ್ಲ. ಇನ್ನು ಮುಂದೆ ಕೊಡುವುದಿಲ್ಲ ಎಂದು ಸರಕಾರ ಹೇಳುವುದಾದರೆ, ಇದುವರೆಗೆ ಮುಜರಾಯಿ ಇಲಾಖೆಯ ಹಣವನ್ನು ಬಿಜೆಪಿ ಸರಕಾರ ಮಸೀದಿಗಳಿಗೆ ತಸ್ತೀಕ್ ಆಗಿ ನೀಡುತ್ತಿತ್ತೆ ಎಂದು ಮುಜರಾಯಿ ಇಲಾಖೆ ಸಚಿವರು ಸ್ಪಷ್ಟಪಡಿಸಬೇಕು ಎಂದು ಡಿಸಿಸಿ ಅಧ್ಯಕ್ಷರು ಒತ್ತಾಯಿಸಿದ್ದಾರೆ.
ಮಹಾರಾಜರ ಕಾಲದಿಂದಲೂ ಧಾರ್ಮಿಕ ಕೇಂದ್ರಗಳಿಗೆ ಇನಾಂ ಆಗಿ ಧನಕನಕ ಅಥವ ಭೂಮಿ ನೀಡಲಾಗುತಿತ್ತು. ಭೂಹಿಡುವಳಿ ಕಾಯಿದೆ ಬಂದ ನಂತರ ದೇವಸ್ಥಾನ, ಮಸೀದಿ,ಬಸದಿಗಳ ಜಮೀನು ಗೇಣಿದಾರರ ಪಾಲಾಯಿತು. ಅಂತಹ ಧಾರ್ಮಿಕ ಕೇಂದ್ರಗಳು ದೈನಂದಿನ ಧಾರ್ಮಿಕ ಕಾರ್ಯಕ್ರಮಗಳನ್ನು ಮುನ್ನಡೆಸಲು ದಯನೀಯ ಸ್ಥಿತಿ ಬಂದಾಗ ಸರಕಾರ ಹೊಸ ಕಾನೂನು ತಂದು ಜಮೀನು ಕಳಕೊಂಡ ಧಾರ್ಮಿಕ ಕೇಂದ್ರಗಳಿಗೆ ಸರಕಾರದ ವತಿಯಿಂದ ತಸ್ತೀಕ್ ನೀಡಲು ತೊಡಗಿತು. ಆರಂಭದಲ್ಲಿ 400 ರೂಪಾಯಿ ಇದ್ದ ತಸ್ತೀಕ್ ಇತ್ತೀಚಿಗೆ 40 ಸಾವಿರ ರೂಪಾಯಿ ದಾಟಿದೆ. ಇದು ತಸ್ತೀಕ್ ನೀಡುವುದರ ಹಿನ್ನೆಲೆ.
ದೇವಸ್ಥಾನಗಳ ಆದಾಯದ ಶೇಕಡ 90ರಷ್ಟು ಹಣವನ್ನು ಅದೇ ದೇವಸ್ಥಾನಕ್ಕೆ ಸಂಬಂಧಪಟ್ಟಂತೆ ವೆಚ್ಚ ಮಾಡಬೇಕು. ಉಳಿದ ಶೇಕಡ 10ರಷ್ಟು ಆದಾ. ರಾಜ್ಯ ಸರಕಾರದ ಬೊಕ್ಕಸಕ್ಕೆ ಹೋಗುತ್ತದೆ. ದೇವಸ್ಥಾನದ ಆದಾಯದ ಒಂದು ಪಾಲು ಮಸೀದಿ ಮತ್ತು ಬಸದಿಗಳಿಗ ನೀಡಲಾಗುತ್ತಿದೆ ಎಂಬ ತಪ್ಪು ಅಭಿಪ್ರಾಯವನ್ನು ಬಿತ್ತುವ ಯತ್ನವನ್ನು ಸರಕಾರ ಮಾಡುತ್ತಿದೆ ಎಂದು ಹರೀಶ್ ಕುಮಾರ್ ಹೇಳಿದರು.
ದೇಶದಲ್ಲಿ ಮತ್ತು ರಾಜ್ಯದಲ್ಲಿ ಆಡಳಿತ ವೈಫಲ್ಯವನ್ನು ಮರೆಮಾಚಲು ಬಿಜೆಪಿ ಇಂತಹ ಭಾವನಾತ್ಮಕ ಹೇಳಿಕೆಗಳನ್ನು ನೀಡಿ ಜನರ ಗಮನ ಬೇರೆಡೆ ಸೆಳೆಯಲು ವಿಫಲ ಯತ್ನ ನಡೆಸುತ್ತಿದೆ. ಸರಕಾರದ ಏಕ ಮಾತ್ರ ಆದ್ಯತೆ ಕೊರೊನಾ ನಿಯಂತ್ರಣ ಆಗಿರಬೇಕು. ಇಂತಹ ಕ್ಷುಲ್ಲಕ ರಾಜಕೀಯ ಇಂತಹ ಸಮಯದಲ್ಲಿ ಮಾಡಬಾರದು ಎಂದು ಅವರು ಹೇಳಿದರು.
ಜನರು ಒಗಟ್ಟಿನಲ್ಲಿದ್ದಾರೆ. ಅವರಲ್ಲಿ ಬಿಕ್ಕಟ್ಟು ಮೂಡಿಸುವ ಕೆಲಸವನ್ನು ಬಿಜೆಪಿ ಮಾಡುತ್ತಿದೆ ಎಂದವರು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶಾಲೆಟ್ ಪಿಂಟೋ, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಲುಕ್ಮಾನ್ ಬಂಟ್ವಾಳ, ಮಹಿಳಾ ಬ್ಲಾಕ್ ಕಾಂಗ್ರೆಸ್ ಪಧಾಧಿಕಾರಿಗಳಾದ ಶಾಂತಲಾ ಗಟ್ಟಿ, ಸಂಜನಾ ಚಲವಾದಿ, ಜಿಲ್ಲಾ ಕಾಂಗ್ರೆಸ್ ಪದಾಧಿಕಾರಿಗಳಾದ ಶುಬೋದಯ ಆಳ್ವ, ಜಯಶೀಲ ಅಡ್ಯಂತಾಯ, ಶಬೀರ್ ಸಿದ್ಧಕಟ್ಟೆ. ವಿದ್ಯಾರ್ಥಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸವಾದ್ ಸುಳ್ಯ ಉಪಸ್ಥಿತರಿದ್ದರು.