ದೇಶವನ್ನಾಳುವ ಸರಕಾರದ ನೀತಿಗಳನ್ನು ಹಿಮ್ಮೆಟ್ಟಿಸದೆ ಜನತೆಯ ಬದುಕನ್ನು ರಕ್ಷಿಸಲು ಅಸಾಧ್ಯ – ಮುನೀರ್ ಕಾಟಿಪಳ್ಳ

ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರದ ನೀತಿಗಳಿಂದ ಜ‌ನಸಾಮಾನ್ಯರು ಘನತೆಯಿಂದ ಬದುಕುವ ಹಕ್ಕನ್ನೇ ಕಳೆದುಕೊಳ್ಳುತ್ತಿದ್ದಾರೆ. ಮನಮೋಹನ್ ಸಿಂಗ್ ಸರಕಾರದ ಅವಧಿಯಲ್ಲಿ ಬಿಜೆಪಿ ಪ್ರಬಲವಾಗಿ ವಿರೋಧಿಸಿದ್ದ ಖಾಸಗೀಕರಣ, ವ್ಯಾಪಾರೀಕರಣದ ನೀತಿಗಳನ್ನು ಈಗ ರಭಸವಾಗಿ ಜಾರಿಗೆ ತರುವ ಮೂಲಕ ಶಿಕ್ಷಣ, ಆರೋಗ್ಯ, ಉದ್ಯೋಗ ಜನಸಾಮಾನ್ಯರಿಗೆ ನಿಲುಕದಂತಾಗಿದೆ. ದೇಶದ ಸಂಪತ್ತು ಬಹುರಾಷ್ಟ್ರೀಯ ಕಂಪೆನಿಗಳ ಪಾಲಾಗುತ್ತಿವೆ. ಬಿಜೆಪಿ ಸರಕಾರದ ವಿರುದ್ಧ ರೂಪುಗೊಳ್ಳುತ್ತಿರುವ ಜನಾಭಿಪ್ರಾಯದ ಲಾಭ ಪಡೆದು ಅಧಿಕಾರಕ್ಕೇರುವ ಕನಸು ಕಾಣುತ್ತಿರುವ ಕಾಂಗ್ರೆಸ್ ನಾಯಕತ್ವ ಯಾವುದೇ ಪರ್ಯಾಯ ನೀತಿಗಳನ್ನು ಮುಂದಿಡದೆ ಯಥಾಸ್ಥಿತಿ ಮುಂದುವರಿಸುವ ನಿರಾಶದಾಯಕ ರಾಜಕಾರಣ ನಡೆಸುತ್ತಿದೆ. ಇಂತಹ ಸಂದರ್ಭದಲ್ಲಿ ಪರ್ಯಾಯ ನೀತಿಗಳ ಮೂಲಕ ಜನಸಾಮಾನ್ಯರ ಸಂಕಟಗಳಿಗೆ ಧ್ವನಿಯಾಗುವ ಎಡಪಕ್ಷಗಳ ಮೇಲೆ ನಿರೀಕ್ಷೆಗಳು ಹೆಚ್ಚಾಗಿವೆ. ದೇಶ ಎದುರಿಸುತ್ತಿರುವ ಅತ್ಯಂತ ಗಂಭೀರ ರಾಜಕೀಯ ಸಂದರ್ಭದಲ್ಲಿ ಸಿಪಿಐಎಂ ಪಕ್ಷದ ಮಹಾ ಅಧಿವೇಶನ ನಡೆಯುತ್ತಿದ್ದು, ತಳಮಟ್ಟದಲ್ಲೇ ಜನತೆಯನ್ನು ಅಣಿನೆರೆಸಲು, ಮೋದಿ ಸರಕಾರದ ಕಾರ್ಪೊರೇಟ್ ಧಣಿಗಳ ಪರ ನೀತಿಗಳ ವಿರುದ್ದ ಅರಿವು ಮೂಡಿಸಲು ಸಮ್ಮೇಳನದ ಈ ಸಂದರ್ಭವನ್ನು ಪಕ್ಷದ ಕಾರ್ಯಕರ್ತರು ವ್ಯವಸ್ಥಿತವಾಗಿ ಬಳಸಿಕೊಳ್ಳಬೇಕು. ಆಳುವ ಸರಕಾರಗಳ ನೀತಿಯನ್ನು ಹಿಮ್ಮೆಟ್ಟಿಸದೆ ಜನತೆಯ ಘನತೆಯಿಂದ ಬದುಕುವ ಹಕ್ಕುಗಳನ್ನು ರಕ್ಷಿಸಲು ಸಾಧ್ಯ ಇಲ್ಲ ಎಂದು ಸಿಪಿಐಎಂ ರಾಜ್ಯ ಸಮಿತಿ ಸದಸ್ಯರಾದ ಮುನೀರ್ ಕಾಟಿಪಳ್ಳರವರು ಹೇಳಿದರು.

ಅವರು ಪಂಜಿಮೊಗರುನಲ್ಲಿ ಜರುಗಿದ CPIM ಮಂಗಳೂರು ನಗರ ಉತ್ತರ ಸಮ್ಮೇಳನದ ಯಶಸ್ವಿಗಾಗಿ ಸ್ವಾಗತ ಸಮಿತಿ ರಚನಾ ಸಭೆಯಲ್ಲಿ ಮಾತನಾಡುತ್ತಾ ಈ ಮಾತುಗಳನ್ನು ಹೇಳಿದರು.

ಸಭೆಗೆ ಮಾರ್ಗದರ್ಶಕರಾಗಿ ಆಗಮಿಸಿದ CPIM ದ.ಕ.ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯರಾದ ಸುನಿಲ್ ಕುಮಾರ್ ಬಜಾಲ್ ರವರು ಮಾತನಾಡುತ್ತಾ, ಹಸಿ ಹಸಿ ಸುಳ್ಳನ್ನು ಹೇಳುತ್ತಾ,ದೇಶದ ಜನತೆಯ ಆಲೋಚನಾ ದಿಕ್ಕನ್ನೇ ಬದಲಿಸಿ,ಭಯದ ವಾತಾವರಣವನ್ನು ಸ್ರಷ್ಠಿಸಿ ತನ್ನ ರಾಜಕೀಯ ಬೇಳೆಯನ್ನು ಬೇಯಿಸುತ್ತಿರುವ ಬಿಜೆಪಿ ಸಂಘಪರಿವಾರ ಭಾರತದ ಭವಿಷ್ಯಕ್ಕೆ ಭಾರೀ ಆಪತ್ತು. ಕೋಮುವಾದದ ರಾಜಕಾರಣವನ್ನು ಸೈದ್ದಾಂತಿಕ ನೆಲೆಯಲ್ಲಿ ಸ್ಪಷ್ಟವಾಗಿ ವಿರೋಧಿಸುವ ಮೂಲಕ ದೇಶದ ಸಂವಿಧಾನವನ್ನು, ಜಾತ್ಯಾತೀತ ಪರಂಪರೆಯನ್ನು ಉಳಿಸಿ ಬೆಳೆಸಬೇಕಾಗಿದೆ ಎಂದು ಹೇಳಿದರು.

ಸಭೆಯ ಅಧ್ಯಕ್ಷತೆಯನ್ನು ವಹಿಸಿದ CPIM ಮಂಗಳೂರು ನಗರ ಉತ್ತರ ಕಾರ್ಯದರ್ಶಿ ದಯಾನಂದ ಶೆಟ್ಟಿಯವರು ಮಾತನಾಡುತ್ತಾ, ಭ್ರಷ್ಟಾಚಾರದ ನಿರ್ಮೂಲನೆ ಮಾಡುವುದಾಗಿ ಬೊಗಳೆ ಬಿಟ್ಟ ಬಿಜೆಪಿಗರು ಇಂದು ಬ್ರಹ್ಮಾಂಡ ಭ್ರಷ್ಟಾಚಾರದಲ್ಲಿ ಮುಳುಗಿದ್ದಾರೆ.ದೇಶದ ಖಜಾನೆಯನ್ನೇ ಲೂಟಿ ಮಾಡುವ ಕೇಂದ್ರ ಹಾಗೂ ರಾಜ್ಯ ಸರಕಾರಗಳು ದೇಶದ ಅಭಿವ್ರದ್ದಿಗೆ ಮಾರಕ ಎಂದು ಹೇಳಿದರು.

ವೇದಿಕೆಯಲ್ಲಿ CPIM ಮಂಗಳೂರು ನಗರ ಮುಖಂಡರಾದ ಬಶೀರ್ ಪಂಜಿಮೊಗರು, ನವೀನ್ ಕೊಂಚಾಡಿ, ಸ್ಥಳೀಯ CPIM ಶಾಖಾ ಕಾರ್ಯದರ್ಶಿಗಳಾದ ನೌಷಾದ್,ಸೌಮ್ಯರವರು ಉಪಸ್ಥಿತರಿದ್ದರು.

ಸಭೆಯು 60 ಮಂದಿಯ ಸ್ವಾಗತ ಸಮಿತಿಯನ್ನು ಆಯ್ಕೆಗೊಳಿಸಿತು. ಕಾರ್ಯಾಧ್ಯಕ್ಷರಾಗಿ ಬಶೀರ್ ಪಂಜಿಮೊಗರು,ಅಧ್ಯಕ್ಷರಾಗಿ ಮುಸ್ತಫಾ,ಪ್ರದಾನ ಕಾರ್ಯದರ್ಶಿಯಾಗಿ ಅನಿಲ್ ಡಿಸೋಜ,ಖಜಾಂಚಿಯಾಗಿ ಶೆರೀಫ್,ಸಂಘಟನಾ ಕಾರ್ಯದರ್ಶಿಗಳಾಗಿ ನೌಷಾದ್, ಸಂತೋಷ್ ಡಿಸೋಜ, ಚರಣ್ ಶೆಟ್ಟಿ, ಸೌಮ್ಯರವರನ್ನು ಸರ್ವಾನುಮತದಿಂದ ಆರಿಸಲಾಯಿತು.

Related Posts

Leave a Reply

Your email address will not be published.