ದ.ಕ. ಜಿಲ್ಲೆಯಲ್ಲಿ ವಾಣಿಜ್ಯ ಚಟುವಟಿಕೆಗಳು ಚುರುಕು
ದ.ಕ. ಜಿಲ್ಲೆಯಲ್ಲಿ ಇಂದಿನಿಂದ ಅನ್‍ಲಾಕ್ ಹಿನ್ನೆಲೆಯಲ್ಲಿ ಇಂದು ಬೆಳಗ್ಗೆ 7ರಿಂದ ಅಪರಾಹ್ನ 2ರವರೆಗೆ ಎಲ್ಲ ಅಂಗಡಿ ಮುಂಗಟ್ಟುಗಳನ್ನು ತೆರೆಯಲು ಜಿಲ್ಲಾಡಳಿತ ಅವಕಾಶ ನೀಡಿದ್ದು, ಅದರಂತೆ ಜಿಲ್ಲೆಯ ವಾಣಿಜ್ಯ ಚಟುವಟಿಕೆಗಳು ಸುಮಾರು ಎರಡು ತಿಂಗಳ ಬಳಿಕ ಪುನಾರಂಭಗೊಂಡಿದೆ.
ಈ ನಡುವೆ ಬಸ್ ಗಳ ಓಡಾಟಕ್ಕೂ ಅವಕಾಶ ಕಲ್ಪಿಸಿದ್ದರಿಂದ ಸರಕಾರಿ ಬಸ್ ಗಳು ಬೆಳಗ್ಗೆಯಿಂದ ಸಂಚಾರ ಆರಂಭಿಸಿವೆ. ಆದರೆ ಬಸ್ಸಿನ ಒಟ್ಟು ಆಸನ ಸಾಮರ್ಥ್ಯದ ಶೇ.50ರಷ್ಟು ಪ್ರಯಾಣಿಕರನ್ನು ಮಾತ್ರ ಕರೆದೊಯ್ಯಬಹುದಾಗಿದೆ. ಅಲ್ಲದೆ ನಿಂತು ಪ್ರಯಾಣಿಸಲು ಅವಕಾಶವಿಲ್ಲ ಎಂದು ಜಿಲ್ಲಾಡಳಿತ ಸ್ಪಷ್ಟ ಸೂಚನೆ ಹೊರಡಿಸಿದೆ. ಈ ಹಿನ್ನೆಲೆಯಲ್ಲಿ ಖಾಸಗಿ ಬಸ್ಸುಗಳು ಇಂದು ರಸ್ತೆಗಿಳಿದಿಲ್ಲ. ಶೇ.50ರಷ್ಟು ಪ್ರಯಾಣಿಕರನ್ನು ಕರೆದೊಯ್ದು ಬಸ್ ಸಂಚಾರ ಮಾಡಲು ಸದ್ಯದ ಸ್ಥಿತಿಯಲ್ಲಿ ಸಾಧ್ಯವಿಲ್ಲ. ಜು.1ರಿಂದ ಬಸ್ ಸಂಚಾರ ಆರಂಭಿಸುವ ಬಗ್ಗೆ ಯೋಚಿಸುತ್ತಿದ್ದೇವೆ ಎಂದು ದ.ಕ.ಜಿಲ್ಲಾ ಬಸ್ ಮಾಲಕರ ಸಂಘದ ಅಧ್ಯಕ್ಷ ದಿಲ್‍ರಾಜ್ ಆಳ್ವ ತಿಳಿಸಿದ್ದಾರೆ.
ಬಟ್ಟೆಬರೆಗಳ, ಪಾದರಕ್ಷೆಗಳ ಅಂಗಡಿಗಳು ಬೆಳಗ್ಗೆಯೇ ತೆರೆದುಕೊಂಡಿದ್ದು, ಸಾಮಗ್ರಿಗಳನ್ನು ಜೋಡಿಸಿಡುವ ಕಾರ್ಯದಲ್ಲಿ ಸಿಬ್ಬಂದಿ ನಿರತರಾಗಿರುವುದು ಕಂಡುಬರುತ್ತಿದೆ. ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ ಹೊಟೇಲ್‍ಗಳನ್ನು ತೆರೆಯಲೂ ಅವಕಾಶ ಕಲ್ಪಿಸಲಾಗಿದೆ. ಅದರಂತೆ ಕೆಲವೊಂದು ಹೊಟೇಲ್‍ಗಳು ಇಂದು ತೆರೆದುಕೊಂಡಿದೆ.