ದ.ಕ ಜಿಲ್ಲೆಯಲ್ಲಿ ವಾರಾಂತ್ಯದ ಕರ್ಫ್ಯೂ ಜಾರಿ, ಅನಾವಶ್ಯಕವಾಗಿ ಓಡಾಡಬಾರದು : ದ.ಕ. ಜಿಲ್ಲಾಧಿಕಾರಿ ಸೂಚನೆ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೋನ ನಿಯಂತ್ರಣಕ್ಕೆ ವಾರಾಂತ್ಯದ ಕರ್ಫ್ಯೂ ಜಾರಿಗೊಳಿಸಲಾಗಿದೆ. ಆ ಸಂದರ್ಭ ಸಂಪೂರ್ಣ ಲಾಕ್‍ಡೌನ್ ಇರಲಿದ್ದು, ಅದನ್ನು ಪರಿಣಾಮಕಾರಿಯಾಗಿ ಅನುಷ್ಟಾನಕ್ಕೆ ತರಬೇಕು ಎಂದು ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ ಅವರು ಸೂಚನೆ ನೀಡಿದರು.

ಕೊರೋನ ನಿಯಂತ್ರಣ ಕುರಿತು ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳು, ತಹಶೀಲ್ದಾರ್‍ಗಳು, ತಾಲೂಕು ಆರೋಗ್ಯಾಧಿಕಾರಿಗಳ ಜೊತೆಗೆ ದ.ಕ.ಜಿಲ್ಲಾಧಿಕಾರಿ ಕಚೇರಿಯ ವೀಡಿಯೊ ಕಾನ್ಫರೆನ್ಸ್ ಹಾಲ್‍ನಲ್ಲಿ ನಡೆದ ವೀಡಿಯೊ ಸಂವಾದದಲ್ಲಿ ಅವರು ಮಾತನಾಡಿದರು.

ಜೂ.25ರ ಶುಕ್ರವಾರ ಸಂಜೆ 7ರಿಂದ ಜೂ.28ರ ಸೋಮವಾರ ಬೆಳಗ್ಗೆ 7ರವರೆಗೆ ಜಿಲ್ಲಾದ್ಯಂತ ಸಂಪೂರ್ಣ ಲಾಕ್‍ಡೌನ್ ಇರಲಿದೆ. ಹಾಲಿನ ವಿತರಣಾ ಕೇಂದ್ರಗಳು, ಆಸ್ಪತ್ರೆ, ಸರಕಾರ ಕೆಲವು ಕಚೇರಿಗಳು ಮಾತ್ರ ತೆರೆಯಲು ಅವಕಾಶವಿದೆ. ಇತರೆ ಯಾವುದೇ ಚಟುವಟಿಕೆಗೆ ಅವಕಾಶವಿಲ್ಲ. ವಾರಾಂತ್ಯದಲ್ಲಿ ಸರಕಾರದ ಬಹುತೇಕ ಕಚೇರಿಗಳಿಗೆ ರಜೆ ಇರುವುದರಿಂದ ಜನರು ಅನಾವಶ್ಯಕವಾಗಿ ಓಡಾಡಬಾರದು. ಸಂಪೂರ್ಣ ಬಂದ್ ಮಾಡುವುದರಿಂದ ಕೊರೋನ ಹರಡುವಿಕೆಯ ಪ್ರಮಾಣವನ್ನು ಗಣನೀಯವಾಗಿ ಕಡಿಮೆ ಮಾಡಲು ಸಾದ್ಯ ಎಂದರು. ಸರಕಾರಿ ಸಹಿತ ಇತರೆ ಖಾಸಗಿ ಕಟ್ಟಡ ಕಾಮಗಾರಿಗಳಿಗೆ, ನಿರಂತರ ಚಲನೆಯಲ್ಲಿರುವ ಕಾರ್ಖಾನೆಗಳಿಗೆ, ಹೊಟೇಲ್‍ಗಳಲ್ಲಿ ಪಾರ್ಸೆಲ್ ಕೊಡಲು ಮಾತ್ರ ಅವಕಾಶವಿದೆ. ಪೂರ್ವ ನಿಗದಿತ ಅನುಮತಿ ಪಡೆದ ಮದುವೆ ಮತ್ತಿತರ ಸಮಾರಂಭಗಳಿಗೆ 25 ಜನರಿಗೆ ಸೀಮಿತಗೊಳಿಸಿ ಮನೆಗಳಲ್ಲಿಯೇ ಮಾಡಿಕೊಳ್ಳಲು ಅವಕಾಶ ನೀಡಲಾಗಿದೆ ಎಂದರು.

Related Posts

Leave a Reply

Your email address will not be published.