ದ.ಕ. ಜಿಲ್ಲೆಯ ಲಸಿಕಾ ಕೇಂದ್ರದಲ್ಲಿ ಅಧಿಕಾರಿಗಳನ್ನು ನೇಮಿಸಿ : ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್ ಆಗ್ರಹ
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಲಸಿಕಾ ಕೇಂದ್ರಗಳಲ್ಲಿ ಬಿಜೆಪಿಯ ಕಾರ್ಯಕರ್ತರು ದರ್ಬಾರು ನಡೆಸುತ್ತಿದ್ದು, ಇದರಿಂದ ಲಸಿಕೆಗಾಗಿ ಜನಸಾಮಾನ್ಯರು ಪರದಾಡುವ ಪರಿಸ್ಥಿತಿ ಎದುರಾಗಿದೆ ಎಂದು ದ.ಕ. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್ ಆರೋಪಿಸಿದ್ದಾರೆ.
ನಗರದ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಲಸಿಕಾ ಕೇಂದ್ರಗಳಲ್ಲಿ ಲಸಿಕೆ ನೀಡುವ ವ್ಯವಸ್ಥೆಯನ್ನು ಸರಪಡಿಸಲು ವಿವಿಧ ಇಲಾಖೆಗಳಲ್ಲಿ ರಜೆಯಲ್ಲಿರುವ ಅಧಿಕಾರಿಗಳನ್ನು ನಿಯೋಜಿಸಬೇಕು. ಲಸಿಕೆ ವಿಷಯದಲ್ಲಿ ಬಿಜೆಪಿ ಶಾಸಕರು ರಾಜಕೀಯ ಮಾಡುವುದನ್ನು ಬಿಡಬೇಕು ಎಂದು ಹೇಳಿದರು. ಲಸಿಕೆ ಕುರಿತಾಗಿ ಕಾಂಗ್ರೆಸ್ ಸುಳ್ಳು ಸುದ್ದಿ ಹಬ್ಬಿಸಿರುವುದರಿಂದ ಜನ ಬೆಳಗ್ಗೆ 3 ಗಂಟೆಗೇ ಲಸಿಕಾ ಕೇಂದ್ರಕ್ಕೆ ಸೇರುತ್ತಾರೆ ಎಂಬ ಆರೋಪವನ್ನು ಶಾಸಕರು ಮಾಡಿದ್ದಾರೆ. ಆದರೆ ವಾಸ್ತವದಲ್ಲಿ ಕಾಂಗ್ರೆಸ್ ಸುದ್ದಿ ಸುಳ್ಳು ಸುದ್ದಿ ಹಬ್ಬಿಸಿದ್ದಲ್ಲ. ಜನರಿಗೆ ಲಸಿಕೆ ನೀಡಲು ಯೋಗ್ಯತೆ ಇಲ್ಲದೆ ಪ್ರತಿಯೊಂದು ವಿಚಾರದಲ್ಲೂ ಕಾಂಗ್ರೆಸ್ ಮೇಲೆ ಬೆಟ್ಟು ಮಾಡುವ ಮೂಲಕ ಕನಸಿನಲ್ಲೂ ಬಿಜೆಪಿಯವರು ಕಾಂಗ್ರೆಸ್ ಬಗ್ಗೆ ಕನವರಿಸುತ್ತಾರೆ ಎಂದು ಹೇಳಿದರು.
ಲಸಿಕೆ ಕೊರತೆ ಕುರಿತಂತೆ ಕಾಂಗ್ರೆಸ್ ಆಂದೋಲನ ನಡೆಸಲಿದ್ದು, ಜೂ. 4ರಂದು ಜಿಲ್ಲಾಧಿಕಾರಿ ಮೂಲಕ ರಾಜ್ಯಪಾಲರಿಗೆ ಈ ಕುರಿತು ಮನವಿ ಸಲ್ಲಿಸಲಿದೆ. ಎಲ್ಲರಿಗೂ ಉಚಿತವಾಗಿ ಲಸಿಕೆಯನ್ನು ಒದಗಿಸಬೇಕು. ಲಸಿಕಾ ಕೇಂದ್ರಗಳಲ್ಲಿ ಗೊಂದಲ ಆಗದಂತೆ ಕ್ರಮ ವಹಿಸಬೇಕು ಎಂದು ನನವಿ ಮಾಡಲಾಗುವುದು ಎಂದು ಹರೀಶ್ ಕುಮಾರ್ ಹೇಳಿದರು.
ಮಾಜಿ ಶಾಸಕ ಜೆ.ಆರ್. ಲೋಬೋ, ಮುಖಂಡರಾದ ಅಬ್ದುಲ್ ರವೂಫ್, ಶಶಿಧರ ಹೆಗ್ಡೆ, ವಿಶ್ವಾಸ್ ಕುಮಾರ್ ದಾಸ್, ನವೀನ್ ಡಿಸೋಜಾ, ಭಾಸ್ಕರ ಕೆ., ಪ್ರವೀಣ್ ಚಂದ್ರ ಆಳ್ವ, ಕೇಶವ ಮರೋಳಿ, ಅನಿಲ್ ಕುಮಾರ್, ಸಲೀಂ, ಶುಭೋದಯ ಆಳ್ವ, ಸಂಶುದ್ದೀನ್, ಟಿ.ಕೆ. ಸುಧೀರ್, ಅಶ್ರಫ್, ಪ್ರಕಾಶ್ ಸಾಲ್ಯಾನ್ ಮೊದಲಾದವರು ಉಪಸ್ಥಿತರಿದ್ದರು.