ನಮಗೆ ಸರ್ಕಾರದ ಹಣ ಬೇಡ, ನಾವು ದುಡಿಯುವ ಜಾಗ ನಮಗೆ ಕೊಡಿ ಸಾಕು..!
ಮಂಗಳೂರಿನ ಮೂಲ ನದಿ ಮೀನುಗಾರರು ಗುರುಪುರ ಹೊಳೆಯಲ್ಲಿ ನಮ್ಮ ಪೂರ್ವಿಕರ ಕಾಲದಿಂದಲೂ ಸಾಂಪ್ರಾದಾಯಿಕ ಮೀನುಗಾರಿಕೆಯನ್ನು ನಡೆಸಿಕೊಂಡು ತಮ್ಮ ಜೀವನವನ್ನು ನಡೆಸುತ್ತಿದ್ದಾರೆ. ನದಿ ಮೀನುಗಾರಿಕೆಯೇ ಅವರ ಜೀವನಾದಾರ ಸಾಂಪ್ರಾದಾಯಿಕವಾದ ವಿವಿಧ ರೀತಿಯ ನದಿ ಮೀನುಗಾರಿಕೆಯನ್ನು ನಡೆಸುತ್ತಾ ಜೀವನ ಸಾಗಿಸುತ್ತಿರುವ ಮೀನುಗಾರರ ಜೀವನ ಈ ಕಷ್ಟವಾಗಿದೆ. ಹೌದು ಸಾಂಪ್ರದಾಯಿಕವಾದ ನದಿ ಮೀನುಗಾರಿಕೆಯನ್ನು ನೀರಿಗೆ ಇಳಿದು ಮೀನುಗಾರಿಕೆ ಮಾಡುವ ಪದ್ದತಿಯಲ್ಲಿ ಬೊಲ್ಪುಬಲೆ ಮತ್ತು ರಂಪಣೆ ವಿಧಾನಗಳು ಮುಖ್ಯವಾದುದು.
ಬಡ ಮಹಿಳೆಯರು ನೀರಿಗೆ ಇಳಿದು ಮರುವಾಯಿ, ಸಿಗಡಿ, ಹಿಡಿಯುವ ಪದ್ಧತಿ ಸಾಂಪ್ರದಾಯಿಕ ನದಿ ಮೀನುಗಾರಿಕೆಯದ್ದು. ಆದರೆ ಈಗ ಮರುಗಾರಿಕೆಯಿಂದ ನದಿ ಮೀನುಗಾರಿಕೆ ಅಸಾದ್ಯವಾಗಿದೆ. ಮರಳು ತೆಗೆದು ನೀರಿನ ನೀರಿನ ಆಳ ಜಾಸ್ತಿಯಾಗಿರುವುದರಿಂದ ದೋಣಿಯಿಂದ ನೀರಿಗೆ ಇಳಿದು ಮೀನುಗಾರಿಕೆ ನಡೆಸಲು ಕಷ್ಟವಾಗುತ್ತಿದೆ. ಮರುವಾಯಿ ತೆಗೆಯುವ, ಸಿಗಡಿ ಹಿಡಿಯುವ ಬಡ ಮಹಿಳೆಯ ಅಳಲನ್ನು ಕೇಳುವವರಿಲ್ಲದಂತಾಗಿದೆ.
ಮರಳುಗಾರಿಕೆ ಎನ್ನುವ ದಂಧೆ ದಕ್ಷಿಣ ಕನ್ನಡ ಜಿಲ್ಲೆಗೆ ದೊಡ್ಡ ಶಾಪವಾಗಿ ಪರಿಣಮಿಸುತ್ತಿದೆ. ಒಂದೆಡೆ ಸೇತುವೆಗಳ ಕುಸಿತ ಇನ್ನೊಂದೆಡೆ ಮೀನುಗಾರಿಕೆಗೆ ಹೊಡೆತ. ಮಂಗಳೂರಿನ ಗುರುಪುರ ಹೊಳೆಯಲ್ಲಿ ಕಳೆದ ಕೆಲವು ವರ್ಷಗಳಿಂದ ನಿರಂತರ ನಡೆಯುತ್ತಿರುವ ಮರಳುಗಾರಿಕೆಯ ಪರಿಣಾಮ ನದಿಯಲ್ಲಿ ಸಾಂಪ್ರಾದಾಯಿಕ ಮೀನುಗಾರಿಕೆ ನಡೆಸುವ ಮೀನುಗಾರರಿಗೆ ತೀವ್ರವಾದ ಆತಂಕ ಎದುರಾಗಿದೆ
ಮರಳು ಅಗೆಯುವುದಿಂದ ನೀರಿನ ಆಳ ಹೆಚ್ಚಾಗಿ ಕೆಲವು ಜೀವ ಹಾನಿಗಳು ಕೂಡ ಈ ಭಾಗದಲ್ಲಿ ಸಂಭವಿಸಿದೆ. ಮರಳು ತೆಗೆಯುವವರು ತಮ್ಮ ದೋಣಿಯ ಲಂಗರು ಮತ್ತು ನೆಲಕ್ಕೆ ಊರಿದ ಗೂಟಗಳನ್ನು ಶಾಶ್ವತವಾಗಿ ಅದೇ ಸ್ಥಳದಲ್ಲಿ ಬಹಳ ದಿನಗಳ ಕಾಲ ಬಿಡುವುದರಿಂದಲೂ ಮೀನುಗಾರರ ಬಲೆಗಳಿಗೆ ಹಾನಿಯಾಗುತ್ತಿದೆ ಅಲ್ಲದೇ ರಾತ್ರಿ ವೇಳೆ ಇಂಜಿನ್ ಬಳಸಿ ಮರಳು ಎತ್ತಲಾಗ್ತಿದೆ.
ಈ ಕಾರಣದಿಂದಾಗಿ ಹೊಳೆಯ ಕೆಲವು ಕಡೆ ಸುಮಾರು 30 ಅಡಿಗಳಷ್ಟು ಆಳ ಸಂಭವಿಸಿದ್ದು, ಈ ಸ್ಥಳದಲ್ಲಿ ಸುಣ್ಣದ ಕಲ್ಲಿನಂತಹ ರಾಸಾಯನಿಕ ಪದರುಗಳು ಮೇಲಕ್ಕೆ ಬಂದಿರುವುದು ಮೀನುಗಾರರ ಆತಂಕವನ್ನು ಹೆಚ್ಚಿಸಿದೆ.
ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ಅಥವಾ ಜನ ಪ್ರತಿನಿಧಿಗಳು ಇವರ ಸಮಸ್ಯೆಯನ್ನು ಆಲಿಸಿ ನಮ್ಮ ಜಿಲ್ಲೆಗೆ ಶಾಪವಾಗಿರುವ ಮರಳುಗಾರಿಕೆ ಎನ್ನುವ ದಂಧೆ ನಿಲ್ಲಿಸಬೇಕು ಸಾಂಪ್ರದಾಯಿಕ ನದಿ ಮೀನುಗಾರಿಕೆ ಉಳಿಸಬೇಕು ಎನ್ನುವುದೇ ನಮ್ಮ ಆಶಯ.