ನಮ್ಮ ಗಮನ ಇರುವುದು ಮೇಕೆದಾಟು ವಿಚಾರ ಮಾತ್ರ: ಉಡುಪಿಯಲ್ಲಿ ಡಿಕೆಶಿ
ನನಗೆ ಕುಮಾರಸ್ವಾಮಿ ಸುದ್ದಿನೂ ಬೇಡ… ಸುಮಲತಾ ಅವರ ಸುದ್ದಿನೂ ಬೇಡ. ನಮ್ಮ ಗಮನ ಇರುವುದು ಮೇಕೆದಾಟು ವಿಚಾರ ಮಾತ್ರ ಎಂದು ಉಡುಪಿಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದರು.
ಅವರು ಉಡುಪಿಯಲ್ಲಿ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದರು. ಮೇಕೆದಾಟು ವಿಚಾರದಲ್ಲಿ ಮುಖ್ಯಮಂತ್ರಿಗಳು ಸ್ಟಾಲಿನ್‌ಗೆ ಪತ್ರ ಬರೆದಿರುವುದು ಸರಿಯಲ್ಲ. ಮೊದಲು ಟೆಂಡರ್ ಕರೆದು ಮೇಕೆದಾಟು ಡ್ಯಾಮ್ ಕಟ್ಟುವ ಕೆಲಸ ಮಾಡಿ. ಡ್ಯಾಮ್ ವಿಚಾರದಲ್ಲಿ ಏರುಪೇರು ಇದ್ದರೆ ಅದಕ್ಕೊಂದು ತಂಡ ಇದೆ. ತಂಡದ ಮೂಲಕ ಸಮಸ್ಯೆಯನ್ನು ಬಗೆಹರಿಸಿ ಎಂದು ಡಿಕೆಶಿ ಹೇಳಿದರು.ಕಾಂಗ್ರೆಸ್ ವಲಸೆ ಶಾಸಕರ ಮರು ಸೇರ್ಪಡೆ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ ಡಿ.ಕೆ. ಶಿವಕುಮಾರ್ ಅವರು, ಈ ಬಗ್ಗೆ ನಾನು ಸದ್ಯ ಪ್ರತಿಕ್ರಿಯೆ ನೀಡುವುದಿಲ್ಲ. ಆಮೇಲೆ ಈ ವಿಚಾರ ಮಾತನಾಡೋಣ ಎಂದರು.
ರಾಜ್ಯಕ್ಕೆ ನೂತನ ರಾಜ್ಯಪಾಲರ ನೇಮಕ ವಿಚಾರದ ಬಗ್ಗೆ ಮಾತನಾಡಿದ ಡಿಕೆಶಿ ಅವರು, ಹೊಸದಾಗಿ ಬಂದವರಿಗೆ ನಾನು ಸ್ವಾಗತ ಮಾಡುತ್ತೇನೆ. ಹೊಸ ರಾಜ್ಯಪಾಲರಿಗೆ ಅಭಿನಂದನೆ ಸಲ್ಲಿಸುತ್ತೇನೆ. ನಿರ್ಗಮಿತ ರಾಜ್ಯಪಾಲರು ತಮ್ಮ ಕೈಲಾದ ಕೆಲಸ ಮಾಡಿದ್ದಾರೆ. ರಾಜಕೀಯವಾಗಿ ನಮಗೆ ಸಾಕಷ್ಟು ಭಿನ್ನಾಭಿಪ್ರಾಯ ಇರಬಹುದು. ಭೇಟಿ ಮಾಡಲು ಬಯಸಿದಾಗಲೆಲ್ಲ ನಮ್ಮನ್ನು ಅವರು ಕರೆದಿದ್ದಾರೆ. ಕಾಂಗ್ರೆಸ್ ಪಕ್ಷದ ಜೊತೆ ಚರ್ಚೆ ಮಾಡಿದ್ದಾರೆ. ಉಳಿದಂತೆ ಪೊಲಿಟಿಕಲ್ ಬಾಸ್‌ಗಳು ಹೇಳಿದಂತೆ ಮಾಡಿದ್ದಾರೆ ಎಂದು ಹೇಳಿದರು.