ಪಂಪ್ ವೆಲ್ ನೆರೆ ಮಾಧ್ಯಮ ಸೃಷ್ಟಿ : ನಳಿನ್ ಅಧ್ಯಕ್ಷತೆ ಸಭೆಯಲ್ಲಿ ಇಂಜಿನಿಯರ್ ಹೇಳಿಕೆ
ಪಂಪ್‌ವೆಲ್‌ನಲ್ಲಿ ನೀರು ನಿಲ್ಲುವುದು ಮಾಧ್ಯಮದ ಸೃಷ್ಟಿ. ಅವರು ಕ್ಯಾಮರಾದಲ್ಲಿ ಝೂಮ್ ಮಾಡಿ ತೋರಿಸುತ್ತಿದ್ದಾರೆ ಹೀಗಂತ.ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಕಾರ್ಯಕಾರಿ ಇಂಜಿನಿಯರ್ ಶಿಶುಮೋಹನ್ ಅವರು ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ ಸಭೆಯಲ್ಲಿ ಹೇಳಿಕೊಂಡಿದ್ದಾರೆ.
ದ.ಕ. ಜಿಲ್ಲಾ ಪಂಚಾಯತ್‌ನ ನೇತ್ರಾವತಿ ಸಭಾಂಗಣದಲ್ಲಿ ಇಂದು ಸಂಸದ ನಳಿನ್ ಕುಮಾರ್ ಕಟೀಲ್ ಅಧ್ಯಕ್ಷತೆಯಲ್ಲಿ ದ.ಕ. ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ ಸಭೆ ನಡೆಯಿತು. ಸಭೆಯಲ್ಲಿ ಪ್ರಾಧಿಕಾರದ ವತಿಯಿಂದ ಕೈಗೆತ್ತಿಕೊಳ್ಳಲಾಗಿರುವ ಕಾಮಗಾರಿಗಳ ಕುರಿತು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಕಾರ್ಯಕಾರಿ ಇಂಜಿನಿಯರ್ ಶಿಶುಮೋಹನ್ ಮಾಹಿತಿ ನೀಡಿದರು. ಇನ್ನು ಪಂಪ್‌ವೆಲ್, ಕೊಟ್ಟಾರ ಚೌಕಿ ಹಾಗೂ ತೊಕ್ಕೊಟ್ಟು ಮೇಲ್ಸೇತುವೆ ತಳಭಾಗದಲ್ಲಿ ಮಳೆಯ ಸಂದರ್ಭ ಕೃತಕ ನೆರೆ ಸೃಷ್ಟಿಯಾಗುತ್ತಿರುವ ಬಗ್ಗೆ ದೂರು ಬರುತ್ತಿರುವುದಾಗಿ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ಸಭೆಯಲ್ಲಿ ಪ್ರಸ್ತಾಪಿಸಿದರು.
ಈ ಬಗ್ಗೆ ಪ್ರತಿಕ್ರಿಯಿಸಿದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಕಾರ್ಯಕಾರಿ ಇಂಜಿನಿಯರ್ ಶಿಶುಮೋಹನ್, ಪಂಪ್‌ವೆಲ್‌ನಲ್ಲಿ ನೀರು ನಿಲ್ಲುವುದು ಮಾಧ್ಯಮದ ಸೃಷ್ಟಿ. ಅವರು ಕ್ಯಾಮರಾದಲ್ಲಿ ಝೂಮ್ ಮಾಡಿ ತೋರಿಸುತ್ತಿದ್ದಾರೆ ಎಂದರು.ಈ ಸಂದರ್ಭ ಜಿಲ್ಲಾಧಿಕಾರಿ ಮಾತನಾಡಿ, ಕೊಟ್ಟಾರ ಚೌಕಿ, ಪಂಪ್‌ವೆಲ್ ಹಾಗೂ ತೊಕ್ಕೊಟ್ಟು ಪ್ರದೇಶಗಳಲ್ಲಿ ಮಳೆ ನೀರು ನಿಂತು ಸಂಚಾರಕ್ಕೆ ತೊಂದರೆಯಾಗುವ ಕುರಿತಂತೆ ಸ್ಥಳೀಯಾಡಳಿತ ನೋಡಲ್ ಅಧಿಕಾರಿಗಳನ್ನು ನೇಮಿಸಿ ಪರಿಶೀಲನೆ ನಡೆಸಿ ವರದಿ ನೀಡಬೇಕೆಂದು ಸೂಚಿಸಿದರು.
ಬಂಟ್ವಾಳದ ಪಲ್ಲಮಜಲು ಎಂಬಲ್ಲಿ 4.20 ಎಕರೆ ಪುರಸಭೆಗೆ ನಿವೇಶನಕ್ಕಾಗಿ ಮಂಜೂರಾಗಿದೆ. ಆದರೆ ಆ ಜಾಗ ಜಲ್ಲಿ ಕೋರೆಯಾಗಿದ್ದು, ಅದು ವಸತಿಗೆ ಪೂರಕವಾಗಿಲ್ಲ. ನಾನು ಶಾಸಕನಾಗುವ ಮೊದಲೇ ಆ ಜಾಗವನ್ನು ನೀಡಲಾಗಿದ್ದರೂ ಯಾರೊಬ್ಬರೂ ಅಲ್ಲಿ ಮನೆಕಟ್ಟಲು ಮುಂದಾಗಿಲ್ಲ ಎಂದು ಬಂಟ್ವಾಳ ಶಾಸಕ ರಾಜೇಶ್ ನಾಯ್ಕಾ ಅಸಮಾಧಾನ ವ್ಯಕ್ತಪಡಿಸಿದರು. ಆ ಜಾಗವನ್ನು ರದ್ದುಪಡಿಸಿ ಪರ್ಯಾಯ ಜಾಗ ನೀಡುವುದು ಸೂಕ್ತ ಎಂದು ಸಂಸದ ನಳಿನ್ ಕುಮಾರ್ ಸಲಹೆ ನೀಡಿದರು.ಸಭೆಯಲ್ಲಿ ಶಾಸಕರಾದ ಉಮಾನಾಥ ಕೋಟ್ಯಾನ್, ಡಾ. ಭರತ್ ಶೆಟ್ಟಿ, ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಕುಮಾರ್, ಮನಪಾ ಆಯುಕ್ತ ಅಕ್ಷಯ್ ಶ್ರೀಧರ್ ಉಪಸ್ಥಿತರಿದ್ದರು.