ಪಕ್ಷಿ ಸಂಕುಲದ ಉಳಿವಿಗಾಗಿ ದಂಪತಿಗಳಿಂದ ವಿಶಿಷ್ಟ ಕಾರ್ಯ

ಮಂಗಳೂರು: ಮಾನವನ ಅಭಿವೃದ್ಧಿಯ ತೆವಲಿಗೆ ಅದೆಷ್ಟೋ ಪ್ರಾಣಿ, ಪಕ್ಷಿ ಸಂಕುಲ, ಸೂಕ್ಷ್ಮಜೀವಿಗಳು ಬಲಿಯಾಗುತ್ತಿವೆ. ಕಾಡು ಕಡಿದು ನಾಡು ಮಾಡಿ ತನ್ನ ಇರವನ್ನು ಗಟ್ಟಿ ಮಾಡಿಕೊಂಡ ಮಾನವ ಪರಿಸರದ ಇತರ ಜೀವಿಗಳ ಜೀವಿಸುವ ಹಕ್ಕನ್ನು ಕಸಿದುಕೊಂಡ ಇದರಿಂದ ನೆಲೆಕಳೆದುಕೊಂಡು ಅದೆಷ್ಟೋ ಜೀವಿಗಳು ಕಣ್ಮರೆಯಾಗಿವೆ. ಆದರೆ ಪ್ರಾಣಿ – ಪಕ್ಷಿಗಳ ಮೇಲೆ ಕಾಳಜಿ ಇದ್ದವರು ಇಲ್ಲವೆಂದೇನೂ ಇಲ್ಲ. ಅದೇ ರೀತಿ ಇಲ್ಲೊಂದು ದಂಪತಿ ಪಕ್ಷಿಗಳು ಗೂಡು ಕಟ್ಟಲು ನೆರವಾಗುವ ಮೂಲಕ ಪಕ್ಷಿ ಸಂಕುಲದ ಅಭಿವೃದ್ಧಿಗಾಗಿ ಸಹಕಾರಿಯಾಗುತ್ತಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಎಲಿಯನಡುಗೋಡು ಗ್ರಾಮದ ಮಾವಿನ ಕಟ್ಟೆ ಮೂಡಾಯಿಬೆಟ್ಟುವಿನ ನಿವಾಸಿ ನಿತ್ಯಾನಂದ ಶೆಟ್ಟಿ-ರಮ್ಯಾ ದಂಪತಿಯೇ ಪಕ್ಷಿ ಸಂಕುಲಗಳ ಉಳಿವಿಗಾಗಿ ತಮ್ಮದೇ ರೀತಿಯಲ್ಲಿ ವಿನೂತನ ಪ್ರಯೋಗ ಮಾಡಿ ಗಮನ ಸೆಳೆದವರು. ಇವರು ತಮ್ಮ ಮನೆಯ ಪರಿಸರದ ಸುತ್ತಲೂ ಬೆಟ್ಟ-ಗುಡ್ಡ-ಕುರುಚಲು ಗಳಲ್ಲಿ ಪಕ್ಷಿಗಳಿಗೆ ಗೂಡು ನಿರ್ಮಿಸಿ ಸಂತಾನೋತ್ಪತ್ತಿಗೆ ಸಹಕಾರ ನೀಡುತ್ತಿದ್ದಾರೆ. ಅಲ್ಲದೆ ಅವುಗಳಿಗೆ ಆಹಾರ, ನೀರಿನ ವ್ಯವಸ್ಥೆಯನ್ನು ಮಾಡುತ್ತಿರುವುದರಿಂದ ಇವರ ಮನೆಯ ಸುತ್ತಲೂ ಸಾಕಷ್ಟು ಪಕ್ಷಿಗಳು ಬರುತ್ತಿರುತ್ತವಂತೆ.

ಅಲ್ಲದೆ ಬಿದಿರುಗಳಿಂದ ಗೂಡು ತಯಾರಿಸಿ ಆಸಕ್ತರಿಗೆ ಉಚಿತವಾಗಿ ವಿತರಿಸುವ ಕಾರ್ಯವನ್ನೂ ಮಾಡುತ್ತಿದ್ದಾರೆ. ನಿತ್ಯಾನಂದ ಶೆಟ್ಟಿಯವರಿಗೆ ನೆಲ, ಜಲ, ಪರಿಸರ, ಜೀವಿಸಂಕುಲದ ಬಗೆಗೆ ವಿಶೇಷ ಆಸಕ್ತಿಯಿದ್ದು ಛಾಯಾಗ್ರಹಣ , ಸೈಕ್ಲಿಂಗ್ , ಟ್ರಕ್ಕಿಂಗ್ , ಬರವಣಿಗೆ ಇವರ ಪ್ರವೃತ್ತಿ. ಕಳೆದ ಹಲವಾರು ವರ್ಷಗಳಿಂದ ನಿತ್ಯಾನಂದ ಶೆಟ್ಟಿ-ರಮ್ಯಾ ದಂಪತಿ ತಮ್ಮ ಮನೆಯಂಗಳ ಮತ್ತು ಮನೆಯ ಸುತ್ತಮುತ್ತಲಿನ ಪರಿಸರವನ್ನು ಪಕ್ಷಿಗಳ ಆವಾಸ ಸ್ಥಾನವನ್ನಾಗಿ ಪರಿವರ್ತಿಸಿ ಮಣ್ಣಿನ ಮಡಿಕೆಗಳ ಗೂಡುಗಳು ಇಟ್ಟು, ಕಾಳುಗಳು, ನೀರು ಒದಗಿಸಿ ಪಕ್ಷಿ ಸಂಕುಲದ ಉಳಿವಿಗಾಗಿ ತಮ್ಮದೇ ರೀತಿಯಲ್ಲಿ ಪ್ರಾಮಾಣಿಕ ಪ್ರಯತ್ನ ನಡೆಸುತ್ತಿದ್ದಾರೆ.

Related Posts

Leave a Reply

Your email address will not be published.