ಪತ್ರಕರ್ತರಿಗೆ, ಕುಟುಂಬ ಸದಸ್ಯರಿಗೆ ಲಸಿಕಾ ಕಾರ್ಯಕ್ರಮ

ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ಜಿಲ್ಲಾಡಳಿತದ ವತಿಯಿಂದ ಪತ್ರಕರ್ತರಿಗೆ ಮತ್ತು ಪತ್ರಕರ್ತರ ಕುಟುಂಬ ಸದಸ್ಯರಿಗೆ ಕೋವಿಶಿಲ್ಡ್ ಲಸಿಕೆ ನೀಡುವ ಶಿಬಿರ ಬುಧವಾರ ಉರ್ವದ ಪತ್ರಿಕಾ ಭವನದಲ್ಲಿ ನಡೆಯಿತು.

ದಕ್ಷಿಣ ಕನ್ನಡ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಕಿಶೋರ್ ಕುಮಾರ್ ಲಸಿಕಾ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿ, ಕೋವಿಡ್ ಸಾಂಕ್ರಾಮಿಕ ರೋಗ ಹರಡುವುದನ್ನು ತಡೆಗಟ್ಟುವ ಸಲುವಾಗಿ ಎಲ್ಲರೂ ಕೋವಿಡ್ ನಿರೋಧಕ ಲಸಿಕೆಯನ್ನು ಪಡೆದುಕೊಳ್ಳಬೇಕು. ಲಸಿಕೆ ಉತ್ಪಾದನೆಯಾಗಿ ಹಂತ ಹಂತವಾಗಿ ಪೂರೈಕೆಯಾಗುತ್ತಿರುವ ಕಾರಣ 45 ವರ್ಷಕ್ಕಿಂತ ಮೇಲಿನವರಿಗೆ ಮೊದಲ ಆದ್ಯತೆ ಮೇರೆಗೆ ಲಸಿಕೆ ನೀಡಲಾಗುತ್ತಿದೆ. ಇದಲ್ಲದೆ 18 ವರ್ಷಕ್ಕಿಂತ ಮೇಲಿನ ಆದ್ಯತಾ ವಲಯದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವವರಿಗೆ ಲಸಿಕೆ ನೀಡಲಾಗುತ್ತಿದೆ ಎಂದು ಹೇಳಿದರು.

ಪತ್ರಕರ್ತರು ಸಾರ್ವಜನಿಕವಾಗಿ ಹೆಚ್ಚು ಓಡಾಟ ನಡೆಸುತ್ತಿರುವ ಕಾರಣಕ್ಕೆ ಎಲ್ಲ ಪತ್ರಕರ್ತರನ್ನು ಮತ್ತು ಅವರ ಕುಟುಂಬದವರನ್ನು ಆದ್ಯತಾ ವಲಯಯದಲ್ಲಿ ಗುರುತಿಸಿ ಲಸಿಕೆ ನೀಡುವ ವ್ಯವಸ್ಥೆಯನ್ನು ಸರಕಾರ ಮಾಡಿದೆ. ಈ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಈ ಶಿಬಿರ ಏರ್ಪಡಿಸಿ ಎಲ್ಲರಿಗೂ ಲಸಿಕೆ ಕೊಡಿಸುವ ಕೆಲಸವನ್ನು ಮಾಡಿರುವುದು ಶ್ಲಾಘನೀಯ ಎಂದು ಹೇಳಿದರು.

ಬುಧವಾರ ನಡೆದ ಶಿಬಿರದಲ್ಲಿ ಪತ್ರಕರ್ತರು, ಅವರ ಕುಟುಂಬದ ಸದಸ್ಯರು, ಪತ್ರಿಕಾ ಏಜೆಂಟರು ಮತ್ತು ಅವರ ಕುಟುಂಬದವರು ಸೇರಿ ಒಟ್ಟು 550 ಮಂದಿಗೆ ಲಸಿಕೆ ನೀಡಲಾಯಿತು. ಎಕ್ಕೂರು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳಾದ ಡಾ.ರೆಹಾನ ಮತ್ತು ಡಾ.ಸೌಜನ್ಯ ಅವರ ತಂಡ ಲಸಿಕಾ ಶಿಬಿರ ನಡೆಸಿಕೊಟ್ಟರು.

ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ್ ನಾಯ್ ಇಂದಾಜೆ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಇಬ್ರಾಹಿಂ ಅಡ್ಕಸ್ಥಳ ವಂದಿಸಿದರು. ಕಾರ್ಯಕಾರಿ ಸಮಿತಿ ಸದಸ್ಯ ಆರ್.ಸಿ.ಭಟ್ ಕಾರ್ಯಕ್ರಮ ನಿರೂಪಿಸಿದರು.

Related Posts

Leave a Reply

Your email address will not be published.