‘ಪಾಡ್ಕಾಸ್ಟ್’ – ಮಾಹಿತಿ ತಂತ್ರಜ್ಞಾನದ ಹೊಸ ಆಯಾಮ
ಪಾಡ್ಕಾಸ್ಟ್ ಮಾಧ್ಯಮ ವೇದಿಕೆ ಜಾಗತಿಕ ಮಟ್ಟದಲ್ಲಿ ದೊಡ್ಡ ವ್ಯವಸ್ಥೆಯಾಗಿ ಹೊರಹೊಮ್ಮುತ್ತಿದ್ದು, ಮಾಹಿತಿ ತಂತ್ರಜ್ಞಾನಕ್ಕೆ ಒಂದು ಹೊಸ ಆಯಾಮವನ್ನು ನೀಡಿದೆ ಎಂದು ಹಿರಿಯ ಪತ್ರಕರ್ತ ಶರತ್ ಹೆಗ್ಡೆ ಕಡ್ತಲ ಹೇಳಿದರು.
ಇಲ್ಲಿನ ಎಸ್.ಡಿ.ಎಮ್ ಸ್ನಾತಕೋತ್ತರ ಕೇಂದ್ರದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದಿಂದ ಆಯೋಜಿಸಿದ್ದ ‘ಧ್ವನಿ ಮಾಧ್ಯಮ – ಅಂಗೈಯಲ್ಲಿ ಅವಕಾಶ’ ಮತ್ತು ‘ಅರವಿನ ಅರಮನೆ ಪಾಡ್ಕಾಸ್ಟ್ ಉದ್ಘಾಟನೆ’ ಕಾರ್ಯಕ್ರಮದಲ್ಲಿ ಅತಿಥಿ ಉಪನ್ಯಾಸಕರಾಗಿ ಮಾತನಾಡಿದರು.
‘ಪಾಡ್ಕಾಸ್ಟ್ ತಾಣವು ಅತೀ ಸುಲಭವಾಗಿ ಉಪಯೋಗಿಸಬಹುದಾದ ಮಾಧ್ಯಮವಾಗಿದೆ. ಇದಕ್ಕೆ ಯಾವುದೇ ಲೈಸನ್ಸ್ನ ಅಗತ್ಯವಿಲ್ಲ. ಜೊತೆಗೆ ಕೇಳುಗರು ಇದನ್ನು ಯಾವ ಹೊತ್ತಿನಲ್ಲಾದರೂ ಕೇಳಬಹುದಾಗಿದೆ. ಸಂಗೀತ ಹಾಗೂ ವ್ಯವಹಾರ ಕ್ಷೇತ್ರದದಲ್ಲಿ ಇದು ವೃತ್ತಿಯಾಗಿ ಪರಿವರ್ತನೆಯಾಗುತ್ತಿರುವುದನ್ನು ನಾವು ಕಾಣಬಹುದು’ ಎಂದರು.
‘ಇಂದಿನ ಬಹುತೇಕ ಮಾಧ್ಯಮಗಳು ಅವರದ್ದೇ ಆದ ಪಾಡ್ಕಾಸ್ಟ್ ವಾಹಿನಿಯನ್ನು ಹೊಂದಿವೆ. ಕನ್ನಡದಲ್ಲೂ ಅನೇಕ ಪತ್ರಿಕೆಗಳು ಈ ತಂತ್ರಜ್ಞಾನದ ಬಳಕೆಯನ್ನು ಮಾಡತೊಡಗಿವೆ. ಅದಲ್ಲದೇ ಪಾಡ್ಕಾಸ್ಟ್ ತಂತ್ರಜ್ಞಾನವನ್ನು ಬ್ರಾಂಡಿಂಗ್ ವೇದಿಕೆಯಾಗಿ ದೊಡ್ಡ-ದೊಡ್ಡ ಸಂಸ್ಥೆಗಳು ಬಳಸಿಕೊಳ್ಳುತ್ತಿವೆ’ ಎಂದರು.
‘ಜಾಗತಿಕವಾಗಿ ನೋಡಿದರೆ ಪಾಡ್ಕಾಸ್ಟ್ ಹಾಗೂ ಅದರ ಬೆಳೆವಣಿಗೆ ದೊಡ್ಡ ಮಟ್ಟದಲ್ಲಿ ಆಗುತ್ತಿದೆ. ಒಂದು ವರದಿಯ ಪ್ರಕಾರ ಪಾಡ್ಕಾಸ್ಟ್ ಕೇಳುಗರ ಸಂಖ್ಯೆಯಲ್ಲಿ ಭಾರತ ಮೂರನೇ ಸ್ಥಾನದಲ್ಲಿದೆ. ಆದರೆ ಭಾರತದಲ್ಲಿ ಇಲ್ಲಿಯ ಮೂಲದ ಪಾಡ್ಕಾಸ್ಟ್ ಕಾರ್ಯಕ್ರಮಗಳು ಹಾಗೂ ಅದರ ಕೇಳುಗರ ಸಂಖ್ಯೆ ಅಷ್ಟಾಗಿ ಬೆಳೆದಿಲ್ಲ’ ಎಂದು ಹೇಳಿದರು.
‘ಭಾರತದ ಪಾಡ್ಕಾಸ್ಟ್ ವಿಷಯಗಳನ್ನು ಗಮನಿಸಿದಾಗ ಹಿಂದಿ ಮತ್ತು ಆಂಗ್ಲ ಭಾಷೆಯಲ್ಲಿ ಹೆಚ್ಚಾಗಿ ವೃತ್ತಿಪರವಾಗಿ ನಡೆಯುತ್ತಾ ಇದೆ. ಭಾರತದಲ್ಲಿ ಶ್ರವಣ ಪರಂಪರೆ, ಹೇಳುವ-ಕೇಳುವ ಪರಂಪರೆ ಇದೆ. ಇದರ ಮೂಲ ಸಿದ್ಧಾಂತದ ಮೇಲೆ ಪಾಡ್ಕಾಸ್ಟ್ ವಿಷಯಗಳನ್ನು ಕಾಣಬಹುದು. ಭಾರತದ ಕಥೆ ಹೇಳುವ ಪರಂಪರೆಯನ್ನು ಮೂಲವಾಗಿ ಇಟ್ಟುಕೊಂಡು ಪಾಡ್ಕಾಸ್ಟ್ ಅನ್ನು ಅಚ್ಚುಕಟ್ಟಾಗಿ ರೂಪಿಸಬಹುದು. ಹಾಗೆಯೇ ಈ ತಂತ್ರಜ್ಞಾನದ ಬಗ್ಗೆ ತಿಳಿದವರು ಆದಷ್ಟು ಜನರಿಗೆ ತಿಳಿಸಿದರೆ ನಮ್ಮ ದೇಶದಲ್ಲಿ ಇದರ ಬೆಳೆವಣಿಗೆಯನ್ನು ಕಾಣಬಹುದು’ ಎಂದರು.
ಇದರೊಂದಿಗೆ ಪಾಡ್ಕಾಸ್ಟ್ ತಾಣದ ತಂತ್ರಜ್ಞಾನ, ಅದರ ಬಳಕೆಯ ಬಗೆ; ವಿಷಯಗಳನ್ನು ಕೇಳುಗರ ರುಚಿಗೆ ತಕ್ಕಂತೆ ಹೇಗೆ ಆಯ್ಕೆ ಮಾಡಬೇಕು ಮತ್ತು ವಿವಿಧ ಸಾಮಾಜಿಕ ಜಾಲತಾಣಗಳ ಮೂಲಕ ಹೇಗೆ ಹೆಚ್ಚಿನ ಸಂಖ್ಯೆಯಲ್ಲಿ ಕೇಳುಗರನ್ನು ತಲುಪಬಹುದು ಎಂದು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಪತ್ರಿಕೋದ್ಯಮ ಸ್ನಾತಕೋತ್ತರದ ದ್ವಿತೀಯ ವರ್ಷದ ವಿದ್ಯಾರ್ಥಿಯಾದ ದಿನೇಶ್.ಎಂ ಇವರ ಹೊಸ ಪಾಡ್ಕಾಸ್ಟ್ ವೇದಿಕೆ ‘ಅರವಿನ ಅರಮನೆ’ ಯನ್ನು ಉದ್ಘಾಟಿಸಲಾಯಿತು.
ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಮುಖ್ಯಸ್ಥರಾದ ಪ್ರೋ ಭಾಸ್ಕರ್ ಹೆಗಡೆ ಪ್ರಸ್ತಾವಿಕವಾಗಿ ಮಾತನಾಡಿ, ‘ಆನ್ ಲೈನ್ ವೇದಿಕೆಯಲ್ಲಿ ತಮ್ಮನ್ನ ತಾವು ಗುರುತಿಸಿಕೊಳ್ಳಲು ಹಲವಾರು ಅವಕಾಶಗಳಿವೆ. ಪಾಡ್ಕಾಸ್ಟ್ನ್ನು ಬಾನುಲಿಯ ಹೊಸ ರೂಪವಾಗಿ ಕಾಣಬಹುದು. ವಿದ್ಯಾರ್ಥಿಗಳು ಈ ದೆಸೆಯಲ್ಲಿ ಯೋಚಿಸಬೇಕು ಹಾಗೂ ಅವಕಾಶಗಳನ್ನು ಸ್ವ ಬೆಳೆವಣಿಗೆಗಾಗಿ ಬಳಸಿಕೊಳ್ಳಬೇಕು’ ಎಂದರು.
ಪತ್ರಿಕೋದ್ಯಮ ಪ್ರಾಧ್ಯಾಪಕಿ ಗೀತಾ ಎ. ಜೆ. ಸ್ವಾಗತಿಸಿದರು. ವಿದ್ಯಾರ್ಥಿಯಾದ ಸ್ವಸ್ತಿಕ್ ಕನ್ಯಾಡಿ ಅತಿಥಿಗಳನ್ನು ಪರಿಚಯಿಸಿದರು ಹಾಗೂ ವಿದ್ಯಾರ್ಥಿನಿ ವಾಣಿ ಭಟ್ಟ ವಂದಿಸಿದರು. ವಿದ್ಯಾರ್ಥಿನಿ ವರ್ಷಾ ಕಾರ್ಯಕ್ರಮ ನಿರ್ವಹಿಸಿದರು.
ಈ ಅತಿಥಿ ಉಪನ್ಯಾಸ ಕಾರ್ಯಕ್ರಮದಲ್ಲಿ ವಿವಿಧ ಮಾಧ್ಯಮ ಪ್ರತಿನಿಧಿಗಳು, ವಿವಿಧ ಕಾಲೇಜುಗಳ ಪತ್ರಿಕೋದ್ಯಮ ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಎಸ್.ಡಿ.ಎಮ್ ಪದವಿ ಹಾಗೂ ಸ್ನಾತಕೋತ್ತರ ಪತ್ರಿಕೋದ್ಯಮ ವಿದ್ಯಾರ್ಥಿಗಳು, ಉಪನ್ಯಾಸಕರು ಉಪಸ್ಥಿತರಿದ್ದರು.
ವರದಿ: ವಿಧಾತ್ರಿ ಭಟ್