ಪುಟ್ಟ ಮಗುವಿನೊಂದಿಗೆ ಬೀದಿ ಪಾಲಾಗಿದ್ದ ಸಂಸಾರಕ್ಕೆ ನೆರವಾದ ಟೀಂ- ಬಿ ಹ್ಯೂಮನ್ ಮತ್ತು ಟೀಂ ಐ.ವೈ.ಸಿ
ಇದೊಂದು ಹೃದಯ ಕಲಕುವ ಘಟನೆ, ಲಾಕ್ ಡೌನ್ ಮತ್ತು ಕೊರೊನಾದಿಂದ ತತ್ತರಿಸಿದ ಜನರ ಬದುಕಿನ ಭೀಕರತೆ ಈ ಘಟನೆ ಸಾಕ್ಷಿ. ತುಮಕೂರಿನ ಸುಬ್ರಹ್ಮಣ್ಯ ಅವರು ಲಾಕ್ ಡೌನ್ ಕಾರಣಕ್ಕೆ ಕೆಲಸ ಕಳೆದುಕೊಂಡಿದ್ದರು. ಪತ್ನಿಗೆ ಮೂರನೇ ಹೆರಿಗೆ ದಿನ ಹತ್ತಿರವಾಗಿತ್ತು. ಇಬ್ಬರು ಮಕ್ಕಳು ಮನೆಯಲ್ಲಿದ್ದರು . ಸಂಕಷ್ಟದ ನಡುವೆ ಹೆರಿಗೆಗಾಗಿ, ಸುಬ್ರಹ್ಮಣ್ಯ ತನ್ನ ಪತ್ನಿಯನ್ನು ಮಂಗಳೂರಿನ ಲೇಡಿಗೋಶನ್ ಆಸ್ಪತ್ರೆಗೆ ಕರೆ ತರುತ್ತಾರೆ. ಪತ್ನಿಯ ಆರೋಗ್ಯಕರವಾಗಿ ಹೆರಿಗೆ ಆಗುತ್ತದೆ.
ಹೆರಿಗೆ ಬಳಿಕ ಮನೆಗೆ ಹಿಂತಿರುಗಲು ಸುಬ್ರಹ್ಮಣ್ಯರ ಕೈಯಲ್ಲಿ ಕಾಸು ಇಲ್ಲ, ಊಟಕ್ಕೂ ಗತಿಯೂ ಇಲ್ಲ. ಲಾಕ್ ಡೌನ್ ಆದ ಕಾರಣ ಲೇಡಿಗೋಶನ್ ಸಮೀಪ ಬೀದಿಯಲ್ಲಿ ತನ್ನ ಹತ್ತು ದಿನಗಳ ಹಸುಗೂಸು ಮತ್ತು ಸಣ್ಣ ಮಕ್ಕಳೊಂದಿಗೆ ರಾತ್ರಿ-ಹಗಲನ್ನು ಕಳೆಯುತ್ತಿದ್ದರು. ಸುಬ್ರಹ್ಮಣ್ಯರ ಸಂಸಾರದ ಈ ಸ್ಥಿತಿಯನ್ನು ನೋಡಿ ವಾರ್ತಾ ಭಾರತಿ ಪತ್ರಿಕೆ ವರದಿ ಮಾಡಿ ಜನರಲ್ಲಿ ಈ ಸಂಸಾರದ ಮೇಲೆ ದಯೆ ತೋರಲು ವಿನಂತಿಸಿತು. ಈ ಸಂದರ್ಭದಲ್ಲಿ ಟೀಂ ಬಿ ಹ್ಯೂಮನ್ ಮತ್ತು ಟೀಂ ಐ.ವೈ.ಸಿ ತಂಡವು ಈ ಸಂಸಾರದತ್ತ ಧಾವಿಸಿ ಅವರಿಗೆ ಸಂಪೂರ್ಣ ನೆರವನ್ನು ನೀಡಿತು.
ಹಲವು ದಿನಗಳಿಂದ ಬೀದಿಯಲ್ಲಿ ಬದುಕುತ್ತಿದ್ದ ಸಂಸಾರವನ್ನು ಗಮನಿಸಿ ಯಾರೋ ಅವರಿಗೆ ಹತ್ತಿರದ ಲಾಡ್ಜ್ ನಲ್ಲಿ ರೂಂ ಬುಕ್ ಮಾಡಿ ಕೊಟ್ಟಿದ್ದರು. ಬಾಡಿಗೆ ಕೊಡದ ಕಾರಣ ಮತ್ತೆ ಬೀದಿಗೆ ಬಂದಿದ್ದರು. ತಕ್ಷಣ ಸ್ಪಂದಿಸಿದ ಟೀಂ ಬಿ ಹ್ಯೂಮನ್ ಸೇವಾ ಸಂಸ್ಥೆಯ ಸ್ಥಾಪಕ ಅಧ್ಯಕ್ಷ ಆಸಿಫ್ ಡೀಲ್ಸ್ ಅವರು ಲಾಡ್ಜ್ ರೂಮಿನ ಬಾಕಿ ಬಾಡಿಗೆ ಪಾವತಿಸಿದರು. ಅನಂತರ ಅದೇ ಲಾಡ್ಜ್ ಗೆ ಇವರನ್ನು ಕರೆದುಕೊಂಡು ಹೋಗಿ ಮತ್ತೆ ರೂಂ ಕೊಡಿಸಿದರು. ಊಟ ತಿಂಡಿ, ಮಗುವಿನ ಶುಚಿತ್ವ ಮತ್ತು ಭದ್ರತೆಗೆ ಬೇಕಾದ ಸಾಮಾಗ್ರಿಗಳನ್ನು ಕೊಟ್ಟರು. ಎರಡು ದಿನದ ಒಳಗಾಗಿ ಕುಲಶೇಖರದಲ್ಲಿ ಮನೆಯೊಂದರಲ್ಲಿ ವಾಸ್ತವ್ಯ ಕೊಡಿಸುವುದಾಗಿ ಹೇಳಿದ ಆಸಿಫ್ ಡೀಲ್ಸ್, ಸುಬ್ರಹ್ಮಣ್ಯರಿಗೆ ಉದ್ಯೋಗದ ಭರವಸೆಯನ್ನು ಕೂಡ ನೀಡಿದ್ದಾರೆ.
ಟೀಂ – ಬಿ ಹ್ಯೂಮನ್ ನ ಈ ನೆರವಿಗೆ ಸುಬ್ರಹ್ಮಣ್ಯರ ಸಂಸಾರವು ಕೃತಜ್ಞತೆ ಸಲ್ಲಿಸಿದೆ. ಟೀಂ – ಬಿ ಹ್ಯೂಮನ್ ಮತ್ತು ಟೀಂ ಐ.ವೈ.ಸಿ ನ ತಂಡದ ಈ ಸೇವಾ ಕಾರ್ಯದಲ್ಲಿ
ಸುಹೈಲ್ ಕಂದಕ್,ಅಹ್ನಾಫ್ ಡೀಲ್, ಬಶೀರ್, ಮಿಶಾಬ್, ನಿಯಾನ್ ಜೊತೆಗಿದ್ದರು.