ಪುತ್ತೂರಿನ ಕೆದಿಲ ಗ್ರಾಮದಲ್ಲಿ ಹದಗೆಟ್ಟ ರಸ್ತೆ: ದುರಸ್ತಿಗೆ ಆಗ್ರಹಿಸಿ ನಾಗರಿಕರಿಂದ ಮನವಿ

ಪುತ್ತೂರು : ಅಭಿವೃದ್ಧಿ ಹೊಂದುತ್ತಿರುವ ಪುತ್ತೂರು ವಿಧಾನಸಭಾ ಕ್ಷೇತ್ರದ ಕೆದಿಲ ಗ್ರಾಮದಲ್ಲಿ ಹಲವು ರಸ್ತೆಗಳು ನಾದುರಸ್ತಿಯಲ್ಲಿದ್ದು, ಕೆದಿಲ ಗ್ರಾಪಂನವರು ಗ್ರಾಮದ ಹಲವು ರಸ್ತೆಗಳ ದುರಸ್ತಿಗೆ ಅನುದಾನ ಒದಗಿಸುವಂತೆ ಬೇಡಿಕೆಯಿಟ್ಟಿದ್ದಾರೆ. ಇದು ತಾಲೂಕಿನ ಇಡೀ ಗ್ರಾಮಸ್ಥರ ಬೇಡಿಕೆಯೂ ಆಗಿದೆ.

ಎಲ್ಲಾ ಸಮುದಾಯದವರು ವಾಸಿಸುವ ಈ ಗ್ರಾಮದಲ್ಲಿ ಕೃಷಿಕರು ಅಧಿಕ ಸಂಖ್ಯೆಯಲ್ಲಿದ್ದಾರೆ. ಹಲವು ಶಾಲೆಗಳು ಕಾರ್ಯಾಚರಿಸುತ್ತಿವೆ. ಅಡಕೆ ಗಾರ್ಬಲ್‌ಗಳು ಇನ್ನಿತರ ಉದ್ಯಮಗಳನ್ನು ಗ್ರಾಮ ಹೊಂದಿದ್ದು ಎಲ್ಲವೂ ಸರಿಯಿದೆ. ಆದರೆ ರಸ್ತೆಗಳು ಮಾತ್ರ ದುರಸ್ತಿ ಕಾಣದೆ ಹಲವಾರು ವರ್ಷಗಳು ಕಳೆದಿದೆ ಎಂಬುದು ಗ್ರಾಮಸ್ಥರ ಗೋಳು.

ಗ್ರಾಪಂ ವ್ಯಾಪ್ತಿಯಲ್ಲಿ ಹಾದು ಹೋಗುವ ಪ್ರಮುಖವಾಗಿ ರಾಷ್ಟ್ರೀಯ ಹೆದ್ದಾರಿಯನ್ನು ಸಂಪರ್ಕಿಸುವ ಪೇರಮೊಗ್ರು-ಗಾಂಧಿನಗರ-ಪಾಟ್ರಕೋಡಿ-ಕುಕ್ಕರಬೆಟ್ಟು ಸುಮಾರು ಐದು ಕಿ.ಮೀ. ಉದ್ದದ ರಸ್ತೆ ಸಹಿತ ಇನ್ನಿತರ ರಾಷ್ಟ್ರೀಯ ಹೆದ್ದಾರಿಯನ್ನು ಸಂಪರ್ಕಿಸುವ ರಸ್ತೆಗಳು ಕಳೆದ 25ವರ್ಷಗಳಿಂದ ಅಭಿವೃದ್ಧಿ ಕಾಣದೆ ೧೨-೧೫ ಫೀಟ್ ಅಗಲದ ರಸ್ತೆ ಕೇವಲ ಎರಡು, ಮೂರು ಫೀಟ್ ಅಗಲಕ್ಕೆ ಇಳಿದಿದ್ದು, ಪಳೆಯುಳಿಕೆಯಂತೆ ಕಾಣುತ್ತಿದೆ.

ಕೆದಿಲ ಗ್ರಾಮದ ಶೇ.50 ರಷ್ಟು ಜನ ಈ ರಸ್ತೆಯನ್ನು ಅವಲಂಬಿಸಿದ್ದು, ಈ ರಸ್ತೆಯಲ್ಲಿ ದಿನಂಪ್ರತಿ ಘನವಾಹನಗಳು, 13 ಶಾಲಾ ವಾಹನಗಳು, ನೂರಾರು ಶಾಲಾ ವಿದ್ಯಾರ್ಥಿಗಳು, ಸಾವಿರಾರು ಸಾರ್ವಜನಿಕರು ಸಂಚರಿಸುತ್ತಿದ್ದಾರೆ. ರಸ್ತೆ ಅಗಲ ಕಿರಿದಾದ ಪರಿಣಾಮ ಈಗಾಗಲೇ ಹಲವು ಅಪಘಾತಗಳು ಈ ರಸ್ತೆಯಲ್ಲಿ ನಡೆದಿರುತ್ತದೆ. ಹಿಂದೊಮ್ಮೆ ಈ ರಸ್ತೆಯಲ್ಲಿ ಪುತ್ತೂರು ಶಾಸಕರ ಕಾರು ಹಾಗೂ ಶಾಲಾ ವಾಹನವೊಂದು ಮುಖಾಮುಖಿ ಡಿಕ್ಕಿಯಾಗಿ ಮಾತಿನ ಚಕಮಕಿಯೂ ನಡೆದಿತ್ತು. ಈ ಸಂದರ್ಭದಲ್ಲಿ ಶಾಸಕರು ರಸ್ತೆ ದುರಸ್ತಿಗೆ ಅನುದಾನ ಒದಗಿಸುವ ಭರವಸೆಯನ್ನೂ ನೀಡಿದ್ದಾರೆ. ರಾಷ್ಟ್ರೀಯ ಹೆದ್ದಾರಿಗಳಲ್ಲಿ ಅಪಘಾತ, ಪ್ರಾಕೃತಿಕ ವಿಕೋಪ ಉಂಟಾದ ಸಂದರ್ಭದಲ್ಲಿ ಸಂಚಾರ ತಡೆ ಉಂಟಾದಲ್ಲಿ ಈ ರಸ್ತೆಯೇ ಬದಲಿ ರಸ್ತೆಯಾಗಿ ಬಳಕೆಯಾಗುತ್ತಿದ್ದು, ದೊಡ್ಡ ಪ್ರಮಾಣದ ಘನ ವಾಹನಗಳು ಸಂಚಾರ ನಡೆಸುತ್ತಿದ್ದು ಈ ಸಂದರ್ಭದಲ್ಲಿ ರಸ್ತೆ ತುಂಬಾ ಕಿರಿದಾಗಿದ್ದರಿಂದ ಎರಡು ವಾಹನಗಳು ಒಂದೇ ಬಾರಿ ಸಂಚರಿಸಲು ಸಾಧ್ಯವಿಲ್ಲ ,ಜೊತೆಗೆ ಡಾಂಬರು ಸಂಪೂರ್ಣ ಕಿತ್ತು ಹೋಗಿರುವುದರಿಂದ ರಸ್ತೆ ಬದಿಯಲ್ಲಿ ನಡೆದಾಡುವ ಜನರಿಗೆ ಕೆಸರು ನೀರು ಎರಚುವುದು ಸಾಮಾನ್ಯವಾಗಿ ಬಿಟ್ಟಿದೆ.

ಬೇಡಿಕೆಯ ಪ್ರಮುಖ ರಸ್ತೆಗಳು :ಕುಕ್ಕರಬೆಟ್ಟು-ಪಾಟ್ರಕೋಡಿ-ಗಾಂಧಿನಗರ-ಪುಂಜತ್ತೋಡಿ- ಗಿ ಟ್ಟತಡ್ಕ ಸುಮಾರು 5 ಕಿ.ಮೀ. ರಸ್ತೆ, ಮಿತ್ತಪಡ್ಪು-ಗಡಿಯಾರ 2 ಕಿ.ಮೀ. ರಸ್ತೆ, ಪಾಟ್ರಕೋಡಿ-ಕುದುಂಬ್ಲಾಡಿ-ಕೆದಿಲ ೨ ಕೆ.ಮೀ., ಆನಡ್ಕ-ಕಜೆ-ಕಬಕ, ಭಗವಂತಕೋಡಿ-ಮುರುವ-ಅಂಗರಾಜೆ ಪರಿಶಿಷ್ಟ ಕಾಲನಿ ರಸ್ತೆ ದುರಸ್ತಿಗೊಳ್ಳಬೇಕಿದೆ.

ಈ ರಸ್ತೆಯ ಮರು ಡಾಮರೀಕರಣಕ್ಕಾಗಿ ಗ್ರಾಮ ಸಡಕ್ ಅಥವಾ ನಮ್ಮ ಗ್ರಾಮ ನಮ್ಮ ರಸ್ತೆ ಯೋಜನೆಯ ದೊಡ್ಡ ಅನುದಾನ ಬೇಕಾಗಿದೆ. ರಸ್ತೆ ದುರಸ್ತಿಯ ಕುರಿತು ಕಳೆದ 20 ವರ್ಷಗಳಿಂದಲೂ ಸಂಬಂಧಿಸಿದ ಶಾಸಕರುಗಳಿಗೆ, ಜಿಪಂ ಸದಸ್ಯರು, ಸಂಬಂದಿಸಿದ ಎಲ್ಲಾ ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸಿದರೂ ಬರೀ ಆಶ್ವಾಸನೆ ನೀಡಿದ್ದಾರೆ ವಿನಹ ಈವರೆಗೂ ರಸ್ತೆಯ ಅಭಿವೃದ್ಧಿಗೆ ಯಾವುದೇ ಅನುದಾನವನ್ನು ಒದಗಿಸಿಲ್ಲ. ಇನ್ನಾದರೂ ಈ ರಸ್ತೆಗೆ ಕಾಯಕಲ್ಪ ದೊರೆಯಬಹುದೇ ಎಂಬುದು ಈ ರಸ್ತೆಯಲ್ಲಿ ಪ್ರಯಾಣಿಸುವ ಸಾರ್ವಜನಿಕರ ಅಂಬೋಣ.

ಕೆಲದಿ ಗ್ರಾಮಕ್ಕೆ ಪುತ್ತೂರು ವಿಧಾನಸಭಾ ಕ್ಷೇತ್ರದ ಶಾಸಕ ಸಂಜೀವ ಮಠಂದೂರು ಅವರು ಸಾಕಷ್ಟು ಅನುದಾನ ಒದಗಿಸಿದ್ದು, ಅಭಿವೃದ್ಧಿ ಕಾರ್ಯಗಳು ನಡೆದಿವೆ. ಆದರೆ ಗ್ರಾಮದ ರಸ್ತೆಗಳ ಸ್ಥಿತಿಗತಿ ಹದಗೆಟ್ಟಿದೆ. ಈಗಾಗಲೇ ಈ ಕುರಿತು ಶಾಸಕರ ಗಮನಕ್ಕೆ ಮನವಿ ಮೂಲಕ ತರಲಾಗಿದೆ. ಅವರ ಸಹಕಾರದ ನಿರೀಕ್ಷೆಯಲ್ಲಿ ನಾವಿದ್ದೇವೆ. 5-10 ಲಕ್ಷದಲ್ಲಿ ಮುಗಿಯುವ ಯೋಜನೆಯಲ್ಲ. ಅನುದಾನ ಜಾಸ್ತಿ ಬೇಕಾಗಬಹುದು. ಈ ಕುರಿತು ಮನವರಿಕೆ ಮಾಡಿದ್ದೇವೆ. ಗ್ರಾಮದ ಆನಡ್ಕ-ಕಜೆ-ಕಬಕ ರಸ್ತೆ,ಪಾಟ್ರಕೋಡಿ-ಕುದುಂಬ್ಲಾಡಿ-ಕೆದಿಲ ಶಾಲೆ ರಸ್ತೆ ಹೀಗೆ ಬಹುತೇಕ ರಾಷ್ಟ್ರೀಯ ಹೆದ್ದಾರಿಗಳನ್ನು ಸಂಪರ್ಕಿಸುವ ರಸ್ತೆ ಅಭಿವೃದ್ಧಿಯ ನಿರೀಕ್ಷೆಯಲ್ಲಿದ್ದೇವೆ ಎಂದು ಹೇಳುತ್ತಾರೆ ಕೆದಿಲ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ ಪದ್ಮನಾಭ ಭಟ್ ಅವರು.

ನಾನು ದಿನಂಪ್ರತಿ ಈ ರಸ್ತೆಯಲ್ಲಿ ಓಡಾಡುತ್ತಿದ್ದು, ಮುಖ್ಯವಾಗಿ ಪ್ರಮುಖ ರಾಷ್ಟ್ರೀಯ ಹೆದ್ದಾರಿಗಳನ್ನು ಸಂಪರ್ಕಿಸುವ ರಸ್ತೆಯಾಗಿದೆ. ತೀರಾ ಹದಗೆಟ್ಟಿರುವ ಈ ರಸ್ತೆಯನ್ನು ಪುತ್ತೂರು ವಿಧಾನಸಭಾ ಕ್ಷೇತ್ರ ಶಾಸಕರು ಆದಷ್ಟು ಬೇಗ ದುರಸ್ಥಿಪಡಿಸಿ ಹೊಸ ರಸ್ತೆಯಾಗಿ ಮಾರ್ಪಾಡು ಮಾಡುವ ಭರವಸೆ ನೀಡಿದ್ದಾರೆ. ಉಳಿದಂತೆ ಗ್ರಾಪಂ ವತಿಯಿಂದ ರಸ್ತೆಗಳ ಚರಂಡಿ ವ್ಯವಸ್ಥೆ ನಾವು ಮಾಡುತ್ತೇವೆ. ರಸ್ತೆ ದುರಸ್ಥಿಗೆ ಜಾಸ್ತಿ ಅನುದಾನ ಬೇಕಾದ್ದರಿಂದ ಅನುದಾನ ಶಾಸಕರ ಮೂಲಕವೇ ಬರಬೇಕಿದೆ ಎಂದು ಹೇಳುತ್ತಾರೆ ಕೆದಿಲ ಗ್ರಾಪಂ ಉಪಾಧ್ಯಕ್ಷ  ಉಮೇಶ್ ಪೂಜಾರಿ.

 

 

 

Related Posts

Leave a Reply

Your email address will not be published.