ಪುತ್ತೂರು ನಗರಸಭೆ ಕಚೇರಿ ಕಟ್ಟಡ, ಮಳೆ ನೀರು ಕೊಯ್ಲು ಅಳವಡಿಕೆಗೆ ಶಿಲನ್ಯಾಸ
ಪುತ್ತೂರು: ಕುಡಿಯುವ ನೀರು ಯೋಜನೆಗಾಗಿ ಸರ್ಕಾರವು ಸಾವಿರಾರು ಕೋಟಿ ರೂಪಾಯಿ ಖರ್ಚು ಮಾಡುತ್ತಿದೆ. ಆದರೂ ದಿನದ ೨೪ ಗಂಟೆಗಳ ನೀರು ಪೂರೈಕೆ ಕಷ್ಟಸಾಧ್ಯವಾಗುತ್ತಿದೆ. ಈ ನಿಟ್ಟಿನಲ್ಲಿ ಕುಡಿಯುವ ನೀರು ಪಡೆಯುವಲ್ಲಿ ಸ್ವಾವಲಂಭಿಗಳಾಲು ಮಳೆ ನೀರು ಕೊಯ್ಲು ಅನಿವಾರ್ಯವಾಗಿದೆ ಎಂದು ಶಾಸಕ ಸಂಜೀವ ಮಠಂದೂರು ಹೇಳಿದರು.ಅವರು ಸೋಮವಾರ ಪುತ್ತೂರು ನಗರಸಭೆಯ ವತಿಯಿಂದ ನಡೆಯಲಿರುವ ನೂತನ ಕಚೇರಿ ಕಟ್ಟಡ ಮತ್ತು ಮಳೆ ನೀರು ಕೊಯ್ಲು ಅಳವಡಿಕೆಯ ಕಾಮಗಾರಿಗೆ ಶಿಲನ್ಯಾಸ ನೆರವೇರಿಸಿ ಮಾತನಾಡಿದರು.
ನಗರಸಭಾ ಅಧ್ಯಕ್ಷ ಕೆ. ಜೀವಂಧರ್ ಜೈನ್ ಮಾತನಾಡಿ ನಗರಸಭೆಯ ವತಿಯಿಂದ ರೂ. ೯ ಲಕ್ಷ ವೆಚ್ಚದಲ್ಲಿ ನೂತನ ಮಳೆಕೊಯ್ಲು ಕಾರ್ಯವನ್ನು ಪ್ರಥಮವಾಗಿ ನಡೆಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಹೊಸ ಮನೆ ನಿರ್ಮಾಣ ಮಾಡುವವರು ಕಡ್ಡಾಯವಾಗಿ ಮಳೆ ನೀರು ಕೊಯ್ಲು ವ್ಯವಸ್ಥೆ ಮಾಡಿಕೊಳ್ಳುವಂತೆ ಯೋಜನೆ ರೂಪಿಸಲಾಗುವುದು. ಅಲ್ಲದೆ ಅದಕ್ಕೆ ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನು ಬಳಸಿಕೊಳ್ಳಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ನಗರಸಭಾ ಪೌರಾಯುಕ್ತ ಮಧು ಎಸ್ ಮನೋಹರ್,ನಗರಸಭಾ ಉಪಾಧ್ಯಕ್ಷೆ ವಿದ್ಯಾಗೌರಿ, ಸ್ಥಾಯಿ ಸಮಿತಿ ಅಧ್ಯಕ್ಷೆ ಗೌರಿ ಬನ್ನೂರು, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಭಾಮಿ ಅಶೋಕ್ ಶೆಣೈ, ಸದಸ್ಯರಾದ ಪಿ.ಜಿ. ಜಗನ್ನಿವಾಸ್ ರಾವ್ ಮತ್ತಿತರರು ಉಪಸ್ಥಿತರಿದ್ದರು.