ಪ್ರವಾಸೋದ್ಯಮಕ್ಕೆ ಪೂರಕವಾಗಿ ರೈಲ್ವೇ ಸೌಲಭ್ಯಗಳು ಮೇಲ್ದರ್ಜೆಗೆ: ಶಾಸಕ ಸಂಜೀವ ಮಠಂದೂರು
ಪುತ್ತೂರು: ಪ್ರದಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ರೈಲ್ವೇ ಇಲಾಖೆಯು ಪ್ರವಾಸೋದ್ಯಮಕ್ಕೆ ಹೆಚ್ಚಿನ ಒತ್ತು ನೀಡಿದ್ದು, ಪ್ರವಾಸೋದ್ಯಮಕ್ಕೆ ಪೂರಕವಾಗಿ ರೈಲ್ವೇ ಸಂಚಾರ ವ್ಯವಸ್ಥೆಯಲ್ಲಿ ಪ್ರಯಾಣಿಕ ರೈಲುಗಳಿಗೆ ಅತ್ಯಾಧುನಿಕ ಮಾದರಿಯ ಹವಾ ನಿಯಂತ್ರಿಣ ವಿಸ್ಟಾ ಡೋಂ ಬೋಗಿಗಳನ್ನು ಅಳವಡಿಸಲಾಗುತ್ತಿದೆ ಎಂದು ಪುತ್ತೂರು ಶಾಸಕ ಸಂಜೀವ ಮಠಂದೂರು ಹೇಳಿದರು.
ಅವರು ಭಾನುವಾರ ಕಬಕ ಪುತ್ತೂರು ಆದರ್ಶ ರೈಲು ನಿಲ್ದಾಣದಲ್ಲಿ ಎಸ್ಟಾ ಡೋಂ ಬೋಗಿಗಳನ್ನು ಅಳವಡಿಸಿದ ಮಂಗಳೂರು ಜಂಕ್ಷನ್-ಯಶವಂತಪುರ ರೈಲು ಬಂಡಿಯನ್ನು ಸ್ವಾಗತಿಸುವ ಕಾರ್ಯಕ್ರಮದಲ್ಲಿ ಮಾತನಾಡಿದರು.ಪುತ್ತೂರು ಕೂಡಾ ದ.ಕ.ಜಿಲ್ಲೆಯ ಎರಡನೇ ಅತೀ ದೊಡ್ಡ ವಾಣಿಜ್ಯ ಪಟ್ಟಣವಾಗಿದ್ದು, ರೈಲ್ವೇ ಸಂಪರ್ಕ ವ್ಯವಸ್ಥೆಯ ಅಭಿವೃದ್ಧಿಗೆ ಇಲ್ಲಿ ಉತ್ತಮ ಅವಕಾಶವಿದೆ. ಈಗಾಗಲೇ ರೈತರ ಕೃಷಿ ಉತ್ಪನ್ನಗಳನ್ನು ಸಾಗಾಟ ಮಾಡುವ ಕಿಸಾನ್ ರೈಲ್ ವ್ಯವಸ್ಥೆಗೆ ಪುತ್ತೂರನ್ನು ಜೋಡಿಸಿಕೊಳ್ಳಲಾಗಿದೆ. ಇನ್ನಷ್ಟು ಹೆಚ್ಚು ಪ್ರಯಾಣಿಕ ರೈಲುಗಳ ಆರಂಭಕ್ಕೆ ಪುತ್ತೂರಿನಲ್ಲಿ ಬೇಡಿಕೆಯಿದೆ ಎಂದರು.ಎಸ್ಟಾ ಡೋಂ ಬೋಗಿಯೊಳಗೆ ತೆರಳಿ ಕೆಲ ನಿಮಿಷ ಆಸೀನರಾಗುವಂತೆ ರೈಲ್ವೇ ಅಧಿಕಾರಿಗಳು ಮಾಡಿದ ಮನವಿಯಂತೆ ಶಾಸಕ ಮಠಂದೂರು ಹವಾನಿಯಂತ್ರಿತ, ಪಾರದರ್ಶಕ ಅತ್ಯಾಧುನಿಕ ಸೌಲಭ್ಯಗಳುಲ್ಲ ಎಸ್ಟಾ ಡೋಂ ಬೋಗಿಯೊಳಗೆ ತೆರಳಿ ಇತರ ಗಣ್ಯರೊಂದಿಗೆ ಆಸೀನರಾದರು.ಬಳಿಕ ರೈಲು ಬೆಂಗಳೂರಿನತ್ತ ತನ್ನ ಪ್ರಯಾಣವನ್ನು ಮುಂದುವರಿಸಿತು.
ಈ ಸಂದರ್ಭದಲ್ಲಿ ನಗರ ಸಭಾ ಅಧ್ಯಕ್ಷ ಕೆ. ಜೀವಂಧರ್ ಜೈನ್, ಉಪಾಧ್ಯಕ್ಷ ವಿದ್ಯಾ ಆರ್ ಗೌರಿ, ಪುಡಾ ಅಧ್ಯಕ್ಷ ಭಾಮಿ ಆಶೋಕ ಶೆಣೈ, ಪುತ್ತೂರು ಎಪಿಎಂಸಿ ಅಧ್ಯಕ್ಷ ದಿನೇಶ್ ಮೆದು, ಪುತ್ತೂರು ನಗರಸಭಾ ಸದಸ್ಯರಾದ ಪಿ.ಜಿ. ಜಗನ್ಕಿವಾಸ್ ರಾವ್, ಸರ್ಕಾರಿ ಆಸ್ಪತ್ರೆಯ ಆರೋಗ್ಯ ರಕ್ಷಾ ಸಮಿತಿ ಸದಸ್ಯ ರಫೀಕ್ ದರ್ಬೆ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಬೂಡಿಯಾರ್ ರಾಧಾಕೃಷ್ಣ ರೈ, ಪುತ್ತೂರು ರೈಲ್ವೇ ಯಾತ್ರಿಕರ ಸಂಘದ ರಾಮಚಂದ್ರ ಪ್ರಭು, ಡಿ.ಕೆ. ಭಟ್, ಸಿಟಿಜನ್ಸ್ ರೈಟ್ಸ್ ಸಂಸ್ಥೆಯ ಟಿ.ವಿ. ರವೀಂದ್ರನ್, ಹಿರಿಯ ಸಾಮಾಜಿಕ ಮುಂದಾಳು ಪಿ. ವಾಮನ ಪೈ, ರೈಲ್ವೇ ಇಲಾಖೆಯ ಮೈಸೂರು ವಿಭಾಗೀಯ ವಾಣಿಜ್ಯ ವ್ಯವಸ್ಥಾಪಕ ಮಂಜುನಾಥ್ ಕಮ್ನಾಡಿ, ಹಿರಿಯ ಟಿಕೆಟ್ ಪರಿವೀಕ್ಷಕ ವಿಠಲ ನಾಯ್ಕ್ ನೇರಳಕಟ್ಟೆ, ರೈಲ್ವೇ ಸ್ಟೇಷನ್ ಮಾಸ್ಟರ್ ಹರಿಚರಣ್ ಯಾದವ್, ರೈಲ್ವೇ ಸಂಚಾರ ನಿರೀಕ್ಷಕ ದೇವಪ್ಪ ನಾಯ್ಕ, ಸಮಾಜಿಕ ಕಾರ್ಯಕರ್ತ ಸುದರ್ಶನ್ ಮತ್ತಿತರರು ಉಪಸ್ಥಿತರಿದ್ದರು.