ಬಡ ದಲಿತ ಕುಟುಂಬಕ್ಕೆ ಮನೆ ನಿರ್ಮಿಸಿ‌ ಕೊಡುವಂತೆ ಒತ್ತಾಯಿಸಿ ಮನವಿ

ಬಂಟ್ವಾಳ : ಬುಡೋಳಿ ಗ್ರಾಮದ ಪಂಜಿಕಲ್ಲು ಗ್ರಾಮ ಪಂಚಾಯತ್ ವ್ಯಾಪ್ತಿಗೆ ಒಳಪಟ್ಟ ಕೇಶವ ಎಂಬವರ ಆದಿ ದ್ರಾವಿಡ ದಲಿತ ಜನಾಂಗಕ್ಕೆ ಸೇರಿದ ಕುಟುಂಬವು ಮನೆ ಕಳೆದುಕೊಂಡು ಗುಡಿಸಲಿನಲ್ಲಿ‌ ವಾಸ ಮಾಡುತ್ತಿದ್ದು ಗ್ರಾಮ ಪಂಚಾಯತ್ ನಿಂದ ವಸತಿ ಯೋಜನೆಯಡಿಯಲ್ಲಿ ಮನೆ ಸಿಗುವ ಭರವಸೆ ನೀಡಿ ಹಳೆಯ ಮನೆಯನ್ನು ಕೆಡವಲಾಗಿದ್ದು ಈಗ ಯಾವುದೇ ಯೋಜನೆ ಕೂಡಾ ಸಿಗದೆ ಗುಡಿಸಲಿನಲ್ಲಿ ಈ ಕುಟುಂಬ ಜೀವನ ನಡೆಸುತ್ತಿದ್ದು ಭಾಗ್ಯಜ್ಯೋತಿ ಯೋಜನೆಯಡಿ ಇದ್ದ ವಿದ್ಯುತ್ ಸಂಪರ್ಕ ಕೂಡಾ ಈಗ ಕಡಿತ ಗೊಂಡಿರುತ್ತದೆ.ಈ ಕುಟುಂಬಕ್ಕೆ ಶೌಚಾಲಯ, ರೇಷನ್ ಕಾರ್ಡ್ ಕೂಡಾ ಇರುವುದಿಲ್ಲ .ಸರಕಾರದ ಯಾವುದೇ ಸೌಲಭ್ಯಗಳು ಕೂಡಾ ಇವರಿಗೆ ಸಿಕ್ಕಿರುವುದಿಲ್ಲ.


ಕುಟುಂಬದ ಯಜಮಾನ ಪಾರ್ಶ್ವವಾಯು ಕಾಯಿಲೆಯಿಂದ ಬಳಲುತ್ತಿದ್ದು ದುಡಿಯಲು ಅಶಕ್ತರಾಗಿದ್ದಾರೆ.ಇವರಿಗೆ ಪತ್ನಿ ಹಾಗೂ ಎರಡು ಹೆಣ್ಣು ಮಕ್ಕಳಿದ್ದು ಒಬ್ಬಳು 9 ವರ್ಷದ ಹೆಣ್ಣು ಮಗಳು ಹಾಗೂ ವಿವಾಹಿತ ಹೆಣ್ಣು ಮಗಳು ಕೂಡಾ ಸಣ್ಣ ಮಗುವಿನೊಂದಿಗೆ ಇದೇ ಗುಡಿಸಲಿನಲ್ಲಿ ವಾಸಿಸುತ್ತಿದ್ದಾರೆ. ಈ ಬಗ್ಗೆ ಸಾಮಾಜಿಕ ಕಾರ್ಯಕರ್ತರಾದ ರಾಜಾ ಚೆಂಡ್ತಿಮಾರ್ ಬಂಟ್ವಾಳ ತಾಲೂಕು ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾ ಧಿಕಾರಿಗಳಿಗೆ ಮನವಿ ನೀಡಿ ಬಡ ಕುಟುಂಬಕ್ಕೆ ಮನೆ ನಿರ್ಮಿಸಿಕೊಡುವಂತೆ ಒತ್ತಾಯಿಸಿದ್ದಾರೆ.


ಸ್ವಾತಂತ್ರ್ಯ ಬಂದು ಏಳು ದಶಕಗಳು ಕಳೆದರೂ ಇಂತಹ ಪರಿಸ್ಥಿತಿ ಯಲ್ಲಿ ಬದುಕುತ್ತಿರುವುದು ಇಡೀ ವ್ಯವಸ್ಥೆಯೇ ನಾಚಿಕೆ ಪಡುವ ಪರಿಸ್ಥಿತಿಯಾಗಿದೆ ಎಂದು ಅವರು ಆರೋಪಿಸಿದ್ದಾರೆ. ಚುನಾವಣೆಯ ಸಂಧರ್ಭದಲ್ಲಿ ಭರವಸೆ ನೀಡುವ ಜನಪ್ರತಿನಿಧಿಗಳು ಈಗ ಎಲ್ಲಿದ್ದಾರೆ ಎಂದು ಅವರು ಪ್ರಶ್ನಿಸಿದ್ದಾರೆ.
ನಿಯೋಗದಲ್ಲಿ ಸಾಮಾಜಿಕ ಕಾರ್ಯಕರ್ತ ರಾಜಾ ಚೆಂಡ್ತಿಮಾರ್, ಸಿ.ಪಿ‌.ಐ.ಎಂ ಬಂಟ್ವಾಳ ತಾಲೂಕು ಕಾರ್ಯದರ್ಶಿ ರಾಮಣ್ಣ ವಿಟ್ಲ, ಪ್ರಜಾ ಪರಿವರ್ತನಾ ವೇದಿಕೆಯ ತಾಲೂಕು ಅಧ್ಯಕ್ಷ ರಾದ ಕೃಷ್ಣಪ್ಪ ಪುದ್ದೊಟ್ಟು. ಡಿ.ವೈ.ಎಫ್‌.ಐ ಮುಖಂಡರಾದ ನ್ಯಾಯವಾದಿ ತುಳಸೀದಾಸ್ ವಿಟ್ಲ, ದಲಿತ ಮುಖಂಡರಾದ ನಾರಾಯಣ ನಂದಾವರ ಮುಂತಾದವರು ಇದ್ದರು.

Related Posts

Leave a Reply

Your email address will not be published.