ಬಸ್ ಚಲಾಯಿಸುವಾಗಲೇ ಕುಸಿದ ಚಾಲಕ : ತಪ್ಪಿದ ದುರಂತ
ಕಿಕ್ಕಿರಿದು ತುಂಬಿದ್ದ ಬಸ್ ಚಲಾಯಿಸಿಕೊಂಡು ಹೋಗುತ್ತಿದ್ದ ವೇಳೆ ಬಸ್ ಚಾಲಕನಿಗೆ ರಕ್ತ ಒತ್ತಡ ಕಡಿಮೆಯಾದ ಪರಿಣಾಮ ಸ್ಟೇರಿಂಗ್ ಮೇಲ್ಗಡೆಯೇ ಉರುಳಿ ಬಿದ್ದ ಘಟನೆ ನಗರ ಹೊರವಲಯದ ಅಡ್ಯಾರ್ ನಲ್ಲಿ ನಡೆದಿದ್ದು ಪ್ರಯಾಣಿಕರು ಅದೃಷ್ಟವಶಾತ್ ಅಪಾಯದಿಂದ ಪಾರಾಗಿದ್ದಾರೆ. ಪುತ್ತೂರಿನಿಂದ ಮಂಗಳೂರಿನ ಸ್ಟೇಟ್ ಬ್ಯಾಂಕಿಗೆ ಬರುತ್ತಿದ್ದ ಸೇಫ್ ವೇ ಟ್ರಾವೆಲ್ಸ್ ಹೆಸರಿನ ಖಾಸಗಿ ಬಸ್ ಅಡ್ಯಾರ್ ಸಮೀಪಿಸುತ್ತಿದ್ದಂತೆ ಚಾಲಕನಿಗೆ ಕಣ್ಣು ಮಂಜಾಗಿದ್ದು ತಕ್ಷಣ ಬಸ್ ನಿಲ್ಲಿಸಿದ್ದಾನೆ. ಚಾಲಕನಿಗೆ ಕಣ್ಣು ಮಂಜಾಗುತ್ತಲೇ ಬಸ್ ಹೆದ್ದಾರಿ ಬದಿಯ ಸಹ್ಯಾದ್ರಿ ಕಾಲೇಜಿನ ಗೇಟ್ ಮುಂಭಾಗದಲ್ಲಿಯೇ ಬಸ್ ನಿಂತಿದೆ.
ಬಸ್ಸಿನಲ್ಲಿ ಬಾಗಿಲಲ್ಲಿ ನೇತಾಡುವಷ್ಟು ಫುಲ್ ಜನರಿದ್ದುದಲ್ಲದೆ ಅರೆಕ್ಷಣ ಚಾಲಕನ ನಿಯಂತ್ರಣ ತಪ್ಪುತ್ತಿದ್ದರೂ ದುರಂತವೇ ನಡೆದುಹೋಗುತ್ತಿತ್ತು. ಬಸ್ ಚಾಲಕ ಪುತ್ತೂರು ಮೂಲದ ಸಂತೋಷ್ ಎಂಬಾತನಾಗಿದ್ದು ಕೂಡಲೇ ಸ್ಥಳೀಯರು ಮತ್ತು ಇತರೇ ಪ್ರಯಾಣಿಕರು ಸೇರಿ ಚಾಲಕನನ್ನು ಸ್ಟೇರಿಂಗ್ ಎಡೆಯಿಂದ ಹೊರಗೆ ಎಳೆದಿದ್ದಾರೆ. ಬಳಿಕ ಪಡೀಲಿನ ನ್ಯೂರೋ ಫಸ್ಟ್ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಬಸ್ಸಿನಲ್ಲಿ ಕಿಕ್ಕಿರಿದು ತುಂಬಿದಷ್ಟು ಜನರು ಇದ್ದರು. ಚಾಲಕ ಹಠಾತ್ತಾಗಿ ರಕ್ತದ ಒತ್ತಡ ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ನೆಲಕ್ಕುರುಳಿದ್ದರಿಂದ ಜನರಲ್ಲಿ ದುರಂತದ ಭಯ ಆವರಿಸಿತ್ತು. ಸ್ವಲ್ಪ ತಪ್ಪಿದ್ದರೂ ಬಸ್ ಉರುಳಿ ಬಿದ್ದು ಅಥವಾ ಬೇರೆ ವಾಹನಕ್ಕೆ ಡಿಕ್ಕಿಯಾಗಿ ಅಪಘಾತ ನಡೆಯುವ ಸಾಧ್ಯತೆ ಇತ್ತು. ಆದರೆ, ಚಾಲಕ ತನಗೆ ಕಣ್ಣು ಮಂಜು ಆವರಿಸುತ್ತಲೇ ಬಸ್ಸಿನ ಬ್ರೇಕ್ ಅದುಮಿದ್ದು ಸ್ಟಾಪ್ ಬಟನ್ ಒತ್ತಿದ್ದಾನೆ. ಬಸ್ಸಿನಲ್ಲಿದ್ದ ಹಲವಾರು ಜನ ಪ್ರಾಣ ಕಳಕೊಳ್ಳುವ ಸಾಧ್ಯತೆ ಇತ್ತು. ಯಬ್ಬಾ ಜೀವ ಉಳಿದಿದ್ದೇ ಹೆಚ್ಚು ಅಂತಾ ಪ್ರಯಾಣಿಕರು ಚಾಲಕನ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.