ಬಿ.ಎಸ್. ಯಡಿಯೂರಪ್ಪ ರಾಜೀನಾಮೆ ಅಂಗೀಕರಿಸಿದ ರಾಜ್ಯಪಾಲರು
ಬಿಜೆಪಿ ಸರ್ಕಾರ ರಾಜ್ಯದಲ್ಲಿ ಅಸ್ಥಿತ್ವಕ್ಕೆ ಬಂದು 2 ವರ್ಷದ ಸಂದರ್ಭದಲ್ಲೇ ಮುಖ್ಯಮಂತ್ರಿ ಸ್ಥಾನಕ್ಕೆ ಸಿಎಂ ಯಡಿಯೂರಪ್ಪ ರಾಜೀನಾಮೆ ಘೋಷಿಸಿದ್ದರು. ಅಲ್ಲದೇ ರಾಜಭವನಕ್ಕೆ ಕಾಲ್ನಡಿಗೆಯಲ್ಲೇ ತೆರಳಿ, ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರಿಗೆ ತಮ್ಮ ರಾಜೀನಾಮೆ ಪತ್ರವನ್ನು ಸಲ್ಲಿಸಿದ್ದರು. ಇದೀಗ ಬಿಎಸ್ ಯಡಿಯೂರಪ್ಪ ಅವರ ಸಿಎಂ ಸ್ಥಾನಕ್ಕೆ ನೀಡಿದಂತ ರಾಜೀನಾಮೆ ಪತ್ರವನ್ನು ರಾಜ್ಯಪಾಲರು ಅಂಗೀಕರಿಸಿದ್ದಾರೆ. ಈ ಮೂಲಕ ಸಿಎಂ ಸ್ಥಾನಕ್ಕೆ ಯಡಿಯೂರಪ್ಪ ಸಲ್ಲಿಸಿದ್ದಂತೆ ರಾಜೀನಾಮೆ ಅಂಗೀಕಾರಗೊಂಡಿದೆ.
ಇಂದು ಬಿಎಸ್ ಯಡಿಯೂರಪ್ಪ ಅವರು ರಾಜಭವನಕ್ಕೆ ತೆರಳಿ, ತಮ್ಮ ಸ್ಥಾನಕ್ಕೆ ರಾಜೀನಾಮೆಯನ್ನು ರಾಜ್ಯಪಾಲರಿಗೆ ಸಲ್ಲಿಸಿದ್ದರು. ಈ ಹಿಂದೆ 2ತಿಂಗಳ ಹಿಂದೆಯೇ ರಾಜೀನಾಮೆ ನೀಡಬೇಕು ಎಂಬುದಾಗಿ ತೀರ್ಮಾನಿಸಿದ್ದೆ. ಆದ್ರೆ ಆ ಸಂದರ್ಭದಲ್ಲಿ ನೀಡೋದು ಸರಿಯಲ್ಲ ಎಂಬುದಾಗಿ ತಿಳಿಸಿದ್ದರು. ಹೀಗಾಗಿ ಇಂದು 2 ವರ್ಷ ಬಿಜೆಪಿ ಸರ್ಕಾರಕ್ಕೆ ತುಂಬಿದ ಸಂದರ್ಭದಲ್ಲಿ ನೀಡಿದ್ದೇನೆ. ನನಗೆ ಇಲ್ಲಿಯವರೆಗೆ ಸಹಕಾರ ನೀಡಿದಂತಹ ಎಲ್ಲರಿಗೂ ಧನ್ಯವಾದಗಳು. ರಾಜ್ಯದ ಜನರಿಗೆ, ಶಿಕಾರಿಪುರ ಕ್ಷೇತ್ರದ ನನ್ನ ಜನತೆಗೆ ಧನ್ಯವಾದಗಳು ಎಂಬುದಾಗಿ ಹೇಳಿದರು.
ನಾನು ಮುಂದಿನ ಸಿಎಂ ಯಾರಾಗಬೇಕು ಎಂಬುದನ್ನು ಯಾರನ್ನು ಸೂಚಿಸಿಲ್ಲ. ನನಗೆ ಎಲ್ಲಾ ರೀತಿಯ ಸ್ಥಾನಮಾನವನ್ನು ಬಿಜೆಪಿ ರಾಷ್ಟ್ರೀಯ ನಾಯಕರು ನೀಡಿದ್ದಾರೆ. ಅವರೆಲ್ಲರಿಗೂ ನನ್ನ ಕೃತಜ್ಞತೆಗಳು. ನನ್ನ ರಾಜೀನಾಮೆಯನ್ನು ರಾಜ್ಯಪಾಲರು ಒಪ್ಪಿಕೊಂಡಿದ್ದಾರೆ. ಮುಂದಿನ ದಿನಗಳಲ್ಲಿ ಪಕ್ಷವನ್ನು ಸಂಘಟಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತೇನೆ. ಆ ನಿಟ್ಟಿನಲ್ಲಿ ಎಲ್ಲರೂ ಕೆಲಸ ಮಾಡೋಣ ಎಂಬುದಾಗಿ ತಿಳಿಸಿದರು.