ಬೆಸೆಂಟ್ ಕಾಲೇಜಿನಲ್ಲಿ ಕ್ಯಾನ್ಸರ್ ಜಾಗೃತಿ ಕಾರ್ಯಕ್ರಮಕ್ಕೆ ಚಾಲನೆ

ಮಂಗಳೂರು: ಕರ್ನಾಟಕ ಕ್ಯಾನ್ಸರ್ ಅವೆರ್‌ನೆಸ್ ಫೋರಮ್ ಮತ್ತು ಮಂಗಳೂರು ಇನ್ಸ್ಟಿಟ್ಯೂಟ್ ಆಫ್ ಆಂಕಾಲಜಿ ವತಿಯಿಂದ ಮಂಗಳೂರಿನ ಬೆಸೆಂಟ್ ಮಹಿಳಾ ಕಾಲೇಜಿನಲ್ಲಿ ಆಯೋಜಿಸಲಾದ ಕ್ಯಾನ್ಸರ್ ಜಾಗೃತಿ ಕಾರ್ಯಕ್ರಮವನ್ನು ಮಂಗಳೂರು ವಿ.ವಿ. ಕುಲಪತಿ ಪ್ರೊ.ಪಿ.ಎಸ್ .ಯಡಪಡಿತ್ತಾಯ ಅವರು ಉದ್ಘಾಟಿಸಿದರು.

ಬಳಿಕ ಮಾತನಾಡಿದ ಅವರು, ಆರಂಭಿಕ ಹಂತದಲ್ಲಿ ಕ್ಯಾನ್ಸರ್ ಪತ್ತೆಯಾದರೆ ಕ್ಯಾನ್ಸರ್ ಗೆ ಪೂರ್ಣವಾದ ಚಿಕಿತ್ಸೆ ಇದೆ. ಈ ನಿಟ್ಟಿನಲ್ಲಿ ಆರೋಗ್ಯ ತಪಾಸಣೆಗೆ ವಿಶೇಷವಾದ ಕಾಳಜಿ ವಹಿಸಬೇಕು. ಕ್ಯಾನ್ಸರ್ ಜಾಗೃತಿಗೆ ಶಿಕ್ಷಣ ಸಂಸ್ಥೆಗಳು ಮತ್ತು ವಿದ್ಯಾರ್ಥಿ ಸಮುದಾಯ ಆದ್ಯತೆಯಿಂದ ಕಾರ್ಯನಿರ್ವಹಿಸಬೇಕಾಗಿದೆ. ಈ ಹಿನ್ನೆಲೆಯಲ್ಲಿ ಮಂಗಳೂರು ವಿಶ್ವವಿದ್ಯಾನಿಲಯ ವಿದ್ಯಾರ್ಥಿಗಳ ಆರೋಗ್ಯ ಜಾಗೃತಿ ಕಾರ್ಯಕ್ರಮಕ್ಕೆ ಹೆಚ್ಚಿನ ಒತ್ತು ನೀಡಲಿದೆ ಎಂದು ಪ್ರೊ.ಪಿ.ಎಸ್.ಯಡಪಡಿತ್ತಾಯ ಅವರು ಹೇಳಿದರು.

ಮಂಗಳೂರು ವಿಶ್ವವಿದ್ಯಾನಿಲಯ ವ್ಯಾಪ್ತಿಯ 207 ಕಾಲೇಜು ವಿದ್ಯಾರ್ಥಿಗಳ ನಡುವೆ ಆರೋಗ್ಯ ಜಾಗೃತಿ ಕಾರ್ಯಕ್ರಮ ನಡೆಸಲು ವಿಶ್ವವಿದ್ಯಾಲಯ ಸಿದ್ದವಿದೆ, ಈ ನಿಟ್ಟಿನಲ್ಲಿ ಎನ್.ಎಸ್.ಎಸ್ ಹಾಗೂ ಯೂತ್ ರೆಡ್ ಕ್ರಾಸ್ ಸಹಯೋಗದೊಂದಿಗೆ ಕಾಲೇಜ್ ಕ್ಲಸ್ಟರ್ ಹಂತದಲ್ಲಿ ಆರೋಗ್ಯ ಜಾಗೃತಿ ಮೂಡಿಸಲಾಗುವುದು ಎಂದು ಕುಲಪತಿ ಪ್ರೊ.ಯಡಪಡಿತ್ತಾಯ ಅವರು ಹೇಳಿದರು.

ಕಾರ್ಯಕ್ರಮದಲ್ಲಿ ಮಂಗಳೂರು ಇನ್ಸ್ಟಿಟ್ಯೂಟ್ ಆಫ್ ಆಂಕಾಲಜಿ ಸಂಸ್ಥೆಯ ಸಂಶೋಧನಾ ವಿಭಾಗದ ಮುಖ್ಯಸ್ಥ ಹಾಗೂ ಹಿರಿಯ ರೆಡಿಯೋ ಬಯಾಲಜಿಸ್ಟ್ ಡಾ.ಎಂ.ಎಸ್.ಬಾಳಿಗ ಅವರು ಆಹಾರ ಶೈಲಿ ಮತ್ತು ಕ್ಯಾನ್ಸರ್ ಬಗ್ಗೆ ಮಾಹಿತಿ ನೀಡಿದರು.

ಕೆ.ಎಂ.ಸಿ ನಿವೃತ್ತ ಪ್ರೊಫೆಸರ್ ಡಾ.ಶಾಂತರಾಮ‌ ಬಾಳಿಗ ಅವರು ಆಹಾರ ಶೈಲಿ ಮತ್ತು ಆರೋಗ್ಯದ ಬಗ್ಗೆ ಮಾಹಿತಿ ನೀಡಿದರು . ಕೆ.ಎಸ್.ಹೆಗ್ಡೆ ಮೆಡಿಕಲ್ ಕಾಲೇಜು ಆಸ್ಪತ್ರೆಯ ತಜ್ಞ ವೈದ್ಯೆ ಡಾ.ಪ್ರತೀಕ್ಷಾ ಜೆ.ರೈ ಅವರು ಗರ್ಭಕೋಶ ಹಾಗೂ ಸ್ತನ ಕ್ಯಾನ್ಸರ್ ಬಗ್ಗೆ ಮಾಹಿತಿ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬೆಸೆಂಟ್ ನ್ಯಾಶನಲ್ ಎಜ್ಯುಕೇಶನ್ ಸೊಸೈಟಿಯ ಅಧ್ಯಕ್ಷ ಕುಡ್ಪಿ ಜಗದೀಶ್ ಶೆಣೈ ಅವರು ವಹಿಸಿದ್ದರು.

ಬೆಸೆಂಟ್ ಶಿಕ್ಷಣ ಸಂಸ್ಥೆಗಳ ಉಪಾಧ್ಯಕ್ಷ ಅಣ್ಣಪ್ಪ ನಾಯಕ್, ಕಾಲೇಜು ಸಂಚಾಲಕಿ ಡಾ.ಮಂಜುಳಾ ಕೆ.ಟಿ , ಕಾರ್ಯಕ್ರಮ ಸಂಯೋಜಕಿ ಮೀರಾ ಎಡ್ನಾ ಕೋಯೊಲ್ಲೊ, ಕರ್ನಾಟಕ ಕ್ಯಾನ್ಸರ್ ಅವೆರ್ ನೆಸ್ ಫೋರಮ್ ನ ಸಂಚಾಲಕ ಧರ್ಮರಾಜ್ ಅಮ್ಮುಂಜೆ ಉಪಸ್ಥಿತರಿದ್ದರು.

ಬೆಸೆಂಟ್ ಕಾಲೇಜಿನ ಉಪನ್ಯಾಸಕಿಯಾಗಿದ್ದ ಸರಿತಾ ಧರ್ಮರಾಜ್ ಅವರ ಸ್ಮರಣಾರ್ಥವಾಗಿ ಈ ಆರೋಗ್ಯ ಜಾಗೃತಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಬೆಸೆಂಟ್ ಕಾಲೇಜಿನ ಪ್ರಾಂಶುಪಾಲ ಡಾ.ಸತೀಶ್ ಕುಮಾರ್ ಶೆಟ್ಟಿ ಸ್ವಾಗತಿಸಿದರು. ರವಿ ಪ್ರಭಾ ಕಾರ್ಯಕ್ರಮ ನಿರೂಪಿಸಿದರು. ವಿದ್ಯಾರ್ಥಿಗಳು ಸಂವಾದದಲ್ಲಿ ಭಾಗವಹಿಸಿದರು.

Related Posts

Leave a Reply

Your email address will not be published.