ಮಂಗಳೂರಿನ ಸರಕು ಸಾಗಾಟದ ಘನ ಲಾರಿಗಳ ಸಂಚಾರಕ್ಕೆ ಗುಂಡ್ಯದಲ್ಲಿ ತಡೆ

ಸಕಲೇಶಪುರ ತಾಲೂಕಿನ ದೋಣಿಗಲ್ ಸಮೀಪ ರಾಷ್ಟ್ರೀಯ ಹೆದ್ದಾರಿ ಕುಸಿತಗೊಂಡಿರುವ ಕಾರಣದಿಂದ ಶಿರಾಡಿ ಘಾಟ್‌ನಲ್ಲಿ ಘನ ವಾಹನಗಳ ಸಂಚಾರಕ್ಕೆ ಹಾಸನ ಜಿಲ್ಲಾಧಿಕಾರಿಯವರು ನಿರ್ಬಂಧ ಹೇರಿದ್ದು, ಇದರ ಮಾಹಿತಿ ತಿಳಿಯದೇ ಮಂಗಳೂರು ಕಡೆಯಿಂದ ಆಗಮಿಸಿರುವ ನೂರಾರು ಸರಕು ಸಾಗಾಟದ ಘನ ಲಾರಿಗಳ ಸಂಚಾರಕ್ಕೆ ಗುಂಡ್ಯ ಚೆಕ್‌ಪೋಸ್ಟ್‌ನಲ್ಲಿ ಉಪ್ಪಿನಂಗಡಿ ಪೊಲೀಸರು ತಡೆಯೊಡ್ಡಿದ್ದಾರೆ.

ಇದರಿಂದಾಗಿ ಕಳೆದ ಮೂರ್‍ನಾಲ್ಕು ದಿನಗಳಿಂದ ನೂರಾರು ಮಂದಿ ಲಾರಿ ಚಾಲಕ, ಕ್ಲೀನರ್‌ಗಳು ಗುಂಡ್ಯದಲ್ಲಿಯೇ ಬಾಕಿಯಾಗಿದ್ದು ಆ.19ರಂದು ಮಧ್ಯಾಹ್ನ ಗುಂಡ್ಯಕ್ಕೆ ಆಗಮಿಸಿದ ಕಡಬ ತಹಶೀಲ್ದಾರ್ ಅನಂತಶಂಕರ್‌ರವರ ಜೊತೆ ನೋವು ತೋಡಿಕೊಂಡು ಆಕ್ರೋಶ ವ್ಯಕ್ತಪಡಿಸಿದರು. ಆದರೆ ಜಿಲ್ಲಾಧಿಕಾರಿಯವರ ಆದೇಶ ಇಲ್ಲದೇ ಶಿರಾಡಿ ಘಾಟ್‌ನಲ್ಲಿ ಘನ ವಾಹನ ಸಂಚಾರಕ್ಕೆ ಅವಕಾಶ ನೀಡಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದ ತಹಶೀಲ್ದಾರ್‌ರವರು ಬದಲಿ ರಸ್ತೆ ಮೂಲಕ ಸಂಚರಿಸುವಂತೆ ಲಾರಿ ಚಾಲಕರಿಗೆ ಸೂಚನೆ ನೀಡಿದರು.
ಮಂಗಳೂರ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75ರ ಸಕಲೇಶಪುರ ತಾಲೂಕಿನ ದೋಣಿಗಲ್‌ನಲ್ಲಿ ತಿಂಗಳ ಹಿಂದೆ ಹೆದ್ದಾರಿ ಕುಸಿತಗೊಂಡ ಕಾರಣದಿಂದ ರಾಷ್ಟ್ರೀಯ ಹೆದ್ದಾರಿಯಲ್ಲಿ ಎಲ್ಲಾ ರೀತಿಯ ವಾಹನಗಳ ಸಂಚಾರ ನಿಷೇಧಿಸಲಾಗಿತ್ತು. ಹೆದ್ದಾರಿ ದುರಸ್ತಿಯಾದ ಹಿನ್ನೆಲೆಯಲ್ಲಿ ಆ.16ರಿಂದ ಅನ್ವಯವಾಗುವಂತೆ ಬೆಳಿಗ್ಗೆ 6ರಿಂದ ಸಂಜೆ 6ರ ತನಕ ಕಾರು, ಜೀಪು, ಟೆಂಪೋ, ಮಿನಿ ವ್ಯಾನ್, ದ್ವಿಚಕ್ರ, ಸಾರ್ವಜನಿಕರು ಸಂಚರಿಸುವ ಬಸ್ಸುಗಳು, ರಾಜಹಂಸ, ಐರಾವತ, 20 ಟನ್ ಸಾಮರ್ಥ್ಯದ ಸರಕು ವಾಹನಗಳು, 6 ಚಕ್ರದ ವಾಹನಗಳ ಸಂಚಾರಕ್ಕೆ ಅನುಮತಿ ನೀಡಿ ಹಾಸನ ಜಿಲ್ಲಾಧಿಕಾರಿ ಆರ್.ಗಿರೀಶ್‌ರವರು ಆದೇಶ ಹೊರಡಿಸಿದ್ದರು. ಆದರೆ ಬುಲೆಟ್ ಟ್ಯಾಂಕರ್, ಪಿಪ್‌ಕಾರ್ಗೋ ಕಂಟೈನರ್, ಲಾಂಗ್ ಚಾಸೀಸ್ ವಾಹನಗಳು, ಹೆವಿ ಕಮರ್ಷಿಯಲ್ ವೆಹಿಕಲ್ಸ್, ಮಲ್ಟಿ ಏಕ್ಸೆಲ್ ಟ್ರಕ್ ಟ್ರೈಲರ್ ಮತ್ತು ಎಲ್ಲಾ ಬಗೆಯ ಅಧಿಕ ಬಾರದ ಸರಕು ಸಾಗಾಣೆ ವಾಹನಗಳ ಸಂಚಾರವನ್ನು ದಿನದ 24 ಗಂಟೆಯೂ ನಿರ್ಬಂಧಿಸಿ ಆದೇಶಿಸಲಾಗಿದೆ. ಆದರೆ ಇದರ ಸರಿಯಾದ ಮಾಹಿತಿ ತಿಳಿಯದೆ ಆ.16ರಂದು ಮಂಗಳೂರು ಕಡೆಯಿಂದ ಆಗಮಿಸಿದ ನೂರಾರು ಘನ ವಾಹನಗಳಿಗೆ ಗುಂಡ್ಯ ಚೆಕ್‌ಪೋಸ್ಟ್‌ನಲ್ಲಿ ಉಪ್ಪಿನಂಗಡಿ ಪೊಲೀಸರು ತಡೆಯೊಡ್ಡಿದ್ದಾರೆ. ಇದರಿಂದಾಗಿ ಕಳೆದ ಮೂರ್‍ನಾಲ್ಕು ದಿನಗಳಿಂದ ಸರಕು ಸಾಗಾಟದ ಲಾರಿಗಳು ಗುಂಡ್ಯದಲ್ಲಿಯೇ ಬಾಕಿಯಾಗಿದ್ದು ನೂರಾರು ಮಂದಿ ಚಾಲಕರು, ನಿರ್ವಾಹಕರು ತೊಂದರೆಗೆ ಸಿಲುಕಿದ್ದಾರೆ.

ಜಿಲ್ಲಾಧಿಕಾರಿಯವರಿಂದ ಅನುಮತಿ ಇಲ್ಲದೇ ಶಿರಾಡಿ ಘಾಟ್‌ನಲ್ಲಿ ಸಂಚಾರಕ್ಕೆ ಅವಕಾಶ ನೀಡಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿ ತೆರಳಿದರು. ಲಾರಿ ಚಾಲಕ, ಕ್ಲೀನರ್‌ಗಳ ಆಕ್ರೋಶದ ಹಿನ್ನೆಲೆಯಲ್ಲಿ ತುಸು ಬಿಗುವಿನ ಪರಿಸ್ಥಿತಿಯೂ ಉಂಟಾಗಿತ್ತು. ಎಸ್.ಐ.ಒಮನ ಹಾಗೂ ಉಪ್ಪಿನಂಗಡಿ ಠಾಣೆಯ ಪೊಲೀಸ್ ಸಿಬ್ಬಂದಿಗಳು ಈ ವೇಳೆ ಉಪಸ್ಥಿತರಿದ್ದರು.

 

 

Related Posts

Leave a Reply

Your email address will not be published.