ಮಂಗಳೂರು-ಯಶವಂತಪುರ ರೈಲಿಗೆ ವಿಸ್ಟಾಡೋಮ್ ಬೋಗಿ: ಜುಲೈ 11ರಿಂದ ಸಂಚಾರ ಆರಂಭ
ಯಶವಂತಪುರ-ಮಂಗಳೂರು ನಡುವೆ ಹಗಲು ಸಂಚರಿಸುವ ರೈಲಿಗೆ ಗಾಜಿನ ಛಾವಣಿಯನ್ನು ಹೊಂದಿರುವ ಆಕರ್ಷಕ ವಿಸ್ಟಾಡೋಮ್ ಬೋಗಿಗಳು ಸೇರ್ಪಡೆಗೊಂಡು ಸಂಚಾರ ಆರಂಭಿಸಲಿರುವ ಸೇವೆಗೆ ಜುಲೈ 11ರಂದು ಬೆಳಗ್ಗೆ 9 ಗಂಟೆಗೆ ಮಂಗಳೂರು ಜಂಕ್ಷನ್ (ಪಡೀಲ್) ರೈಲು ನಿಲ್ದಾಣದಲ್ಲಿ ಚಾಲನೆ ಸಿಗಲಿದೆ.ಮಂಗಳೂರು ಜಂಕ್ಷನ್ನಿಂದ ಹೊರಡುವ ಯಶವಂತಪುರ ಮಂಗಳೂರು ಎಕ್ಸ್ಪ್ರೆಸ್ ವಿಶೇಷ ರೈಲಿನಲ್ಲಿ ಈ ವಿಸ್ಟಾ ಡೋಮ್ ಅಳವಡಿಕೆಯಾಗಲಿದೆ. ಈ ವಿಶೇಷ ಬೋಗಿಯು ಪಶ್ಚಿಮ ಘಟ್ಟದ ನಡುವೆ ಸಂಚರಿಸುವ ಸಂದರ್ಭ ರೈಲು ಪ್ರಯಾಣಿಕರಿಗೆ ಪ್ರಕೃತಿಯ ರಮಣೀಯ ಸೌಂದರ್ಯವನ್ನು ಕಣ್ತುಂಬಿಸುವ ಅವಕಾಶವನ್ನು ನೀಡಲಿದೆ.
ಪಶ್ಚಿಮಘಟ್ಟ ಮತ್ತು ಕರಾವಳಿ ಭಾಗದಲ್ಲಿ ಸಂಚರಿಸುವ ಮೂರು ರೈಲುಗಳ ದ್ವಿತೀಯ ದರ್ಜೆಯ ಒಂದು ಸಾಮಾನ್ಯ ಬೋಗಿಯನ್ನು ತೆಗೆದು ತಲಾ ಎರಡು ವಿಸ್ಟಾಡೋಮ್ ಕೋಚ್ಗಳನ್ನು ಜೋಡಿಸಲಾಗುತ್ತದೆ. ಬೆಂಗಳೂರು-ಮಂಗಳೂರು ನಡುವೆ ಸಕಲೇಶಪುರದಿಂದ ಸುಬ್ರಹ್ಮಣ್ಯ ದವರೆಗೆ ಹಾದುಹೋಗುವ 55 ಕಿ.ಮೀ. ರೈಲು ಮಾರ್ಗ ಪ್ರಯಾಣಿಕರಿಗೆ ಪ್ರಕೃತಿ ಸೊಬಗಿನ ದರ್ಶನವನ್ನು ನೀಡುತ್ತದೆ. ಕಳೆದ ಹಲವು ವರ್ಷ ಗಳಿಂದ ಈ ಮಾರ್ಗದಲ್ಲಿ ಸಂಚರಿಸುವ ರೈಲುಗಳಿಗೆ ಗಾಜಿನ ಛಾವಣಿ, ಕಿಟಕಿಗಳನ್ನು ಅಳವಡಿಸುವಂತೆ ಸಾಕಷ್ಟು ಮಂದಿ ಮನವಿ ಮಾಡಿದ್ದರು. ಅದರಂತೆ ವಿಸ್ಟಾಡೋಮ್ ರೈಲು ಸಂಚಾರ ಆರಂಭಿಸುತ್ತಿದೆ.ಪಶ್ಚಿಮ ಘಟ್ಟದ ನಡುವೆ ಹಾದುಹೋಗುವ ಈ ರೈಲುಮಾರ್ಗದಲ್ಲಿ ಸಂಚರಿಸುವವರಿಗೆ ಶಿರಾಡಿ ಘಾಟಿಯ ಸೌಂದರ್ಯವನ್ನು ರೈಲಿನೊಳಗೆ ಕುಳಿತು ಸವಿಯುವ ಭಾಗ್ಯ ಸಿಗಲಿದೆ. ಮಾರ್ಗ ಮಧ್ಯದಲ್ಲಿ ಅರಣ್ಯ, ಜಲಪಾತ, ಸುರಂಗ, ಸೇತುವೆಗಳ ರಮಣೀಯ ನೋಟವನ್ನು ಪ್ರಯಾಣಿಕರು ಆಸ್ವಾದಿಸಬಹುದು. ಮಳೆಗಾಲದಲ್ಲೇ ಈ ಸಂಚಾರ ಆರಂಭಗೊಳ್ಳಲಿರುವ ಕಾರಣ ಪ್ರಕೃತಿಯ ಸೊಬಗು ಮತ್ತಷ್ಟು ರೋಮಾಂಚನ ಕಾರಿಯಾಗಲಿದೆ.
ವಿಸ್ಟಾಡೋಮ್ ಕೋಚ್ ಗಾಜಿನ ದೊಡ್ಡ ಚಾವಣಿ ಒಳಗೊಂಡಿದೆ. 180 ಡಿಗ್ರಿ ಕೋನದಲ್ಲಿ ಸುತ್ತುವ ಸುಖಾಸನಗಳು ಇರಲಿವೆ. ಜಿಪಿಎಸ್ ಆಧಾರಿತ ಮಾಹಿತಿ ವ್ಯವಸ್ಥೆ, ಮೈಕ್ರೊ ಓವನ್, ಪುಟ್ಟ ರೆಫ್ರಿಜರೇಟರ್ಗಳ ಸಹಿತ ಹಲವು ಸೌಲಭ್ಯಗಳನ್ನು ಹೊಂದಿದೆ.