ಮಂಗಳೂರು-ಯಶವಂತಪುರ ಹಗಲು ರೈಲು ’ವಿಸ್ಟಾಡೋಮ್’ ಗೆ ಚಾಲನೆ

ಮಂಗಳೂರು-ಯಶವಂತಪುರ ನಡುವೆ ಹಗಲು ಸಂಚರಿಸುವ ಆಕರ್ಷಕ ರೈಲು ’ವಿಸ್ಟಾಡೋಮ್’ ಗೆ ಇಂದು ಮಂಗಳೂರು ರೈಲು ನಿಲ್ದಾಣದಲ್ಲಿ ಚಾಲನೆ ನೀಡಲಾಯಿತು.

ಸಂಸದ ನಳಿನ್ ಕುಮಾರ್ ಕಟೀಲ್ ಅವರು ಹಸಿರು ನಿಶಾನೆ ತೋರಿಸಿ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು ರೈಲ್ವೆ ಇಲಾಖೆಯು ಹೆಚ್ಚು ಮುತುವರ್ಜಿ ವಹಿಸಿ ಪ್ರವಾಸೋದ್ಯಮಕ್ಕೆ ಒತ್ತು ನೀಡುವ ಪ್ರಯತ್ನ ಮಾಡಿದೆ. ಸಾರ್ವಜನಿಕರು ಅನೇಕ ಬೇಡಿಕೆಗಳನ್ಬು ಮುಂದಿಟ್ಟಿದ್ದು, ಒಂದೊಂದೇ ಬೇಡಿಕೆಗಳನ್ನು ಈಡೇರಿಸುತ್ತಾ ಬಂದಿದೆ. 2014ರವರೆಗೆ ಆಮೆಗತಿಯಲ್ಲಿ ಸಾಗುತ್ತಿದ್ದ ಅಭಿವೃದ್ಧಿ ಕಾಮಗಾರಿಯು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರಕಾರ ಬಂದ ಬಳಿಕ ಸಾಕಷ್ಟು ತ್ವರಿತವಾಗಿ ನಡೆಯುತ್ತಿದೆ ಎಂದು ಹೇಳಿದರು.

ಪ್ರತೀ ವಿಸ್ಟಾಡೋಮ ಬೋಗಿಯಲ್ಲಿ 44 ಮಂದಿ ಪ್ರಯಾಣಿಸಬಹುದಾಗಿದೆ. ಎರಡು ಬೋಗಿಯಲ್ಲಿ 88 ಮಂದಿ ಪ್ರಯಾಣಿಸಬಹುದಾಗಿದೆ. ಈ ವಿಶೇಷ ಬೋಗಿಯು ಪಶ್ಚಿಮ ಘಟ್ಟದ ನಡುವೆ ಸಂಚರಿಸುವ ಸಂದರ್ಭ ರೈಲು ಪ್ರಯಾಣಿಕರಿಗೆ ಪ್ರಕೃತಿಯ ರಮಣೀಯ ಸೌಂದರ್ಯವನ್ನು ಕಣ್ತುಂಬಿಸುವ ಅವಕಾಶ ಸಿಗಲಿವೆ.ಪಶ್ಚಿಮಘಟ್ಟ ಮತ್ತು ಕರಾವಳಿ ಭಾಗದಲ್ಲಿ ಸಂಚರಿಸುವ ಮೂರು ರೈಲುಗಳ ದ್ವಿತೀಯ ದರ್ಜೆಯ ಒಂದು ಸಾಮಾನ್ಯ ಬೋಗಿಯನ್ನು ತೆಗೆದು ತಲಾ ಎರಡು ವಿಸ್ಟಾಡೋಮ್ ಕೋಚ್‌ಗಳನ್ನು ಜೋಡಿಸಲಾಗಿದೆ. ಬೆಂಗಳೂರು-ಮಂಗಳೂರು ನಡುವೆ ಸಕಲೇಶಪುರದಿಂದ ಸುಬ್ರಹ್ಮಣ್ಯದವರೆಗೆ ಹಾದುಹೋಗುವ 55 ಕಿ.ಮೀ. ರೈಲು ಮಾರ್ಗ ಪ್ರಯಾಣಿಕರು ಪ್ರಕೃತಿಯ ಸೊಬಗಿನ ದರ್ಶನವನ್ನು ಪಡೆಯಲಿದ್ದಾರೆ.ಕಳೆದ ಹಲವು ವರ್ಷಗಳಿಂದ ಈ ಮಾರ್ಗದಲ್ಲಿ ಸಂಚರಿಸುವ ರೈಲುಗಳಿಗೆ ಗಾಜಿನ ಛಾವಣಿ, ಕಿಟಕಿಗಳನ್ನು ಅಳವಡಿಸುವಂತೆ ಸಾರ್ವಜನಿಕರು ಮನವಿ ಮಾಡಿದ ಮೇರೆಗೆ ವಿಸ್ಟಾಡೋಮ್ ರೈಲು ಸಂಚಾರ ಆರಂಭಗೊಂಡಿದೆ.

ಈ ಸಂದರ್ಭ ಜಿಲ್ಲಾಧಿಕಾರಿ ಡಾ. ರಾಜೇಂದ್ರ, ಶಾಸಕ ವೇದವ್ಯಾಸ್ ಕಾಮತ್, ಮೇಯರ್ ಪ್ರೇಮಾನಂದ ಶೆಟ್ಟಿ, ವಿಭಾಗೀಯ ರೈಲ್ವೆ ವ್ಯವಸ್ಥಾಪಕ ತ್ರಿಲೋಕ್ ಕೊಠಾರಿ, ಕಾರ್ಪೊಟರ್‌ಗಳಾದ ಶೋಭಾ ಪೂಜಾರಿ, ಸುಧೀರ್ ಶೆಟ್ಟಿ ಕಣ್ಣೂರು, ಸಂದೀಪ್ ಗರೋಡಿ ಮತ್ತಿತರರು ಉಪಸ್ಥಿತರಿದ್ದರು.

 

Related Posts

Leave a Reply

Your email address will not be published.