ಮಂಜೇಶ್ವರ ಗ್ರಾ.ಪಂ. ವ್ಯಾಪ್ತಿಯಲ್ಲಿ ತ್ಯಾಜ್ಯಗಳ ರಾಶಿ ಸಾಂಕ್ರಾಮಿಕ ರೋಗದ ಭೀತಿಯಲ್ಲಿ ಸ್ಥಳೀಯ ಜನತೆ
ಮಂಜೇಶ್ವರ; ಮಂಜೇಶ್ವರ ಗ್ರಾ. ಪಂ. ವ್ಯಾಪ್ತಿಯಲ್ಲಿರುವ ಎರಡು ಹಾಗೂ ನಾಲ್ಕನೇ ವಾರ್ಡನ್ನು ಸಂಪರ್ಕಿಸುವ ಕುಂಜತ್ತೂರು ಪದವು ರಸ್ತೆಯ ಇಬ್ಬಾಗದಲ್ಲೂ ತ್ಯಾಜ್ಯಗಳು ತುಂಬಿ ದುರ್ವಾಸನೆಯಿಂದ ಸಾರ್ವಜನಿಕರು ಮೂಗು ಮುಚ್ಚಿ ನಡೆಯುವ ಪರಿಸ್ಥಿತಿ ಬಂದೊದಗಿದೆ. ಸಾಂಕ್ರಾಮಿಕ ರೋಗದ ಭೀತಿಯು ಎದುರಾಗಿದೆ. ತ್ಯಾಜ್ಯ ಎಸೆಯುವವರನ್ನು ಪತ್ತೆ ಹಚ್ಚಲು ಹರಸಾಹಸ ಪಡುತ್ತಿರುವ ಮಧ್ಯೆ ಸ್ಕೂಟರಿನಲ್ಲಿ ತಂದು ತ್ಯಾಜ್ಯ ಬಿಸಾಕಿದವನ ಮಾಹಿತಿಯನ್ನು ಸ್ಥಳೀಯರೊಬ್ಬರು ಮಾಜಿ ಮಂಜೇಶ್ವರ ಗ್ರಾ. ಪಂ. ಅಧ್ಯಕ್ಷೆ ಹಾಗೂ ಪ್ರಸ್ಥುತ ವಾರ್ಡ್ ಸದಸ್ಯೆಯಾಗಿರುವ ಮುಶ್ರತ್ ಜಹಾನ್‌ಗೆ ನೀಡಿದ್ದಾರೆ.
ಈ ಹಿನ್ನೆಲೆಯಲ್ಲಿ ಸ್ಕೂಟರ್ ನೋಂದಾವಣೆ ಸಂಖ್ಯೆಯನ್ನು ವಾರ್ಡ್ ಸದಸ್ಯೆ ಮಂಜೇಶ್ವರ ಪೊಲೀಸರಿಗೆ ನೀಡಿ ದೂರು ದಾಖಲಿಸಿ ಬಳಿಕ ಪೊಲೀಸರು ನಡೆಸಿದ ಪರಿಶೋಧನೆಯಲ್ಲಿ ತ್ಯಾಜ್ಯ ಎಸೆದವನನ್ನು ಪತ್ತೆ ಹಚ್ಚಲಾಯಿತು. ಸ್ಕೂಟರ್ ಮಾಲಕನ ಭಾವನಾಗಿರುವ ಉಪ್ಪಳ ನಿವಾಸಿ ಶಮೀರ್ ಎಂಬಾತ ಉಪ್ಪಳದಿಂದ ಕುಂಜತ್ತೂರು ಪದವು ಸಂಬಂಧಿಕರ ಮನೆಗೆ ಆಗಮಿಸುವಾಗ ತ್ಯಾಜ್ಯ ಎಸೆದ ಹಿನ್ನೆಲೆಯಲ್ಲಿ ಆತನೇ ಅದನ್ನು ವಿಲೇವಾರಿ ಮಾಡುವಂತೆ ಸೂಚಿಸಲಾಯಿತು.
ಇದರಂತೆ ಎಸೆದ ತ್ಯಾಜ್ಯವನ್ನು ವಾರ್ಡ್ ಸದಸ್ಯಳ ಸಾನಿಧ್ಯದಲ್ಲೇ ವಿಲೇವಾರಿ ಮಾಡಲಾಯಿತು. ಇನ್ನು ಮುಂದಕ್ಕೆ ಸಿಸಿ ಕ್ಯಾಮರಾವನ್ನು ಅಳವಡಿಸಿ ತ್ಯಾಜ್ಯ ಎಸೆಯುವವರ ವಿರುದ್ದ ಭಾರೀ ಮೊತ್ತದ ದಂಡ ವಿದಿಸಲು ಶಿಫಾರಸ್ಸು ಮಾಡುವುದಾಗಿ ವಾರ್ಡ್ ಸದಸ್ಯೆ ತಿಳಿಸಿದ್ದಾರೆ.