ಮರಳು ಮಾಫಿಯಾವೇ ಮರವೂರು ಸೇತುವೆ ಬಿರುಕಿಗೆ ಕಾರಣ: ಅಭಯಚಂದ್ರ ಜೈನ್
ಮರುವೂರು ಸೇತುವೆ ಬಿರುಕು ಬಿಟ್ಟಿರುವುದು ಆಘಾತಕಾರಿ ವಿಚಾರವಾಗಿದೆ. ಮರಳು ಮಾಫಿಯಾವೇ ಈ ಅವಘಡಕ್ಕೆ ಕಾರಣ ಎಂದು ಮಾಜಿ ಸಚಿವ ಅಭಯಚಂದ್ರ ಜೈನ್ ಆರೋಪಿಸಿದರು.
ಅವರು ಮಂಗಳೂರಿನ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದರು. ಜೆಸಿಬಿ ಮೂಲಕ ಸೇತುವೆ ಸುತ್ತಮುತ್ತ ಹೂಳೆತ್ತುವ ನೆಪದಲ್ಲಿ ಇಲ್ಲಿ ಅವ್ಯಾಹತವಾಗಿ ಮರಳು ಮಾಫಿಯಾ ನಡೆಯುತ್ತಿದೆ. ಜಿಲ್ಲಾಡಳಿತ ಹಾಗೂ ಜನಪ್ರತಿನಿಧಿಗಳು ಈ ಬಗ್ಗೆ ಮೌನ ವಹಿಸಿರುವುದು ಈ ದುರಂತಕ್ಕೆ ಕಾರಣ ಎಂದು ಆರೋಪಿಸಿದರು.ಪರ್ಯಾಯ ಸೇತುವೆ ನಿರ್ಮಾಣಕ್ಕೆ ಮುಂದಾಗುವ ಮೊದಲು ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ಪರಿಶೀಲನೆ ಮಾಡಿ ಕ್ರಮ ವಹಿಸಬೇಕಿತ್ತು. ಹಿಂದೆಲ್ಲಾ ಜಿಲ್ಲಾಧಿಕಾರಿಗಳು ತಾಲೂಕು ಕೇಂದ್ರಗಳ ಅತಿಥಿ ಗೃಹಗಳಲ್ಲಿ ಶಿಬಿರ ನಡೆಸಿ ಸ್ಥಳೀಯ ಸಮಸ್ಯೆಗಳನ್ನು ಅರಿತುಕೊಳ್ಳುತ್ತಿದ್ದರು. ಅಂತಹ ವ್ಯವಸ್ಥೆ ಈಗ ಇಲ್ಲ ಎಂದು ಹೇಳಿದ ಅಭಯಚಂದ್ರ ಜೈನ್, ಇದೀಗ ಮರವೂರು ಸೇತುವೆಯ ಜತೆಗೆ ಬಹುಗ್ರಾಮ ಕುಡಿಯುವ ನೀರಿಗಾಗಿ ಹಿಂದಿನ ಶಾಸಕರಾದ ವಿಜಯ ಕುಮಾರ್ ಶೆಟ್ಟಿಯವರ ಮುತುವರ್ಜಿಯಲ್ಲಿ ನಿರ್ಮಿಸಲಾದ ಕಿಂಡಿ ಅಣೆಕಟ್ಟಿಗೂ ಅಪಾಯವನ್ನು ತಂದೊಡ್ಡಿದೆ. ಜತೆಗೆ ಕೊಂಕಣ ರೈಲ್ವೆಯ ಸೇತುವೆಯೂ ಇಲ್ಲಿ ಹಾದು ಹೋಗುತ್ತಿದ್ದು, ಅದಕ್ಕೂ ಹಾನಿಯಾಗುವ ಸಾಧ್ಯತೆ ಇದೆ ಎಂದು ಆತಂಕ ವ್ಯಕ್ತಪಡಿಸಿದರು.ಯುವ ಕಾಂಗ್ರೆಸ್ ಮಾಜಿ ಜಿಲ್ಲಾಧ್ಯಕ್ಷ ಮಿಥುನ್ ರೈ ಮಾತನಾಡಿ, ಡ್ರೆಜ್ಜಿಂಗ್ ನೆಪದಲ್ಲಿ ಇಲ್ಲಿ ಪ್ರತಿನಿತ್ಯ ಮರುಳುಗಾರಿಕೆ ನಡೆಯುತ್ತಿರುವುದರಿಂದ ಈ ದುರಂತ ಸಂಭವಿಸಿದೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್, ಮುಖಂಡರಾದ ವಿನಯರಾಜ್, ಶಾಲೆಟ್ ಪಿಂಟೋ, ಅನಿಲ್ ಕುಮಾರ್, ಮೆರಿಲ್ ರೇಗೋ, ಸವದ್ ಸುಳ್ಯ, ಸಿರಾಜ್, ಹನೀಫ್ ಉಪಸ್ಥಿತರಿದ್ದರು.