ಮೀನುಗಾರರ ಸಮಸ್ಯೆಗಳ ಪರಿಹಾರಕ್ಕೆ ಕಾಂಗ್ರೆಸ್ ಧ್ವನಿಯಾಗಲಿದೆ: ಡಿ.ಕೆ. ಶಿವಕುಮಾರ್
ಮೀನುಗಾರರ ಸಮಸ್ಯೆಗಳ ಪರಿಹಾರಕ್ಕೆ ಕಾಂಗ್ರೆಸ್ ಸದನದ ಒಳಗೆ ಹಾಗೂ ಹೊರಗೆ ಮೀನುಗಾರರ ಧ್ವನಿಯಾಗಲಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದರು.
ಮಂಗಳೂರು ಸುಲ್ತಾನ್‌ಬತ್ತೇರಿಯ ಬೋಳೂರಿನ ಮೊಗವೀರ ಸಮುದಾಯ ಭವನದಲ್ಲಿ ಜಿಲ್ಲಾ ಮೊಗವೀರರ ಕುಂದು ಕೊರೆತೆಗಳನ್ನು ಅಧ್ಯಯನ ಸಭೆಯಲ್ಲಿ ಮಾತನಾಡಿದರು. ಕೇರಳ, ಗೋವಾದಲ್ಲಿರುವಂತೆ ಕರ್ನಾಟಕದಲ್ಲೂ ಕರಾವಳಿಯ ತೀರದಲ್ಲಿ ಬದುಕುತ್ತಿರುವ ಮೀನುಗಾರರಿಗೆ ಅನ್ಯಾಯವಾಗಬಾರದು. ಆಂದ್ರದಲ್ಲಿ ದೊರೆಯುವಂತೆ ಡೀಸೆಲ್ ಸಬ್ಸಿಡಿ ಕರ್ನಾಟಕದ ಮೀನುಗಾರರಿಗೆ ದೊರೆಯಬೇಕು. ಈ ನಿಟ್ಟಿನಲ್ಲಿ ಕಾಂಗ್ರೆಸ್ ಮೀನುಗಾರರ ಧ್ವನಿಯಾಗಲಿದೆ ಎಂದು ಅವರು ಹೇಳಿದರು.
ಇನ್ನು ಕೋವಿಡ್ ಸಂದರ್ಭದಲ್ಲಿ ಲಕ್ಷಾಂತರ ಮಂದಿ ಮೀನುಗಾರರಿದ್ದರೂ ಕೇವಲ ಕೆಲವೇ ಮಂದಿಗೆ ಪರಿಹಾರ ನೀಡುವ ತೀರ್ಮಾನದಿಂದ ಮೀನುಗಾರರ ಸಮುದಾಯಕ್ಕೆ ಆಗಿರುವ ಅನ್ಯಾಯವನ್ನು ಸರಿಪಡಿಸಲು ಸರ್ಕಾರದ ಗಮನ ಸೆಳೆಯಬೇಕೆಂದು ಮೀನುಗಾರ ಮುಖಂಡ ಹಾಗೂ ಉದ್ಯಮಿ ಪ್ರಸಾದ್ ಕಾಂಚನ್ ಮನವಿ ಮಾಡಿಕೊಂಡರು.
ಇನ್ನು ಮತ್ತೊರ್ವ ಮೀನುಗಾರ ಮುಖಂಡ ಮೋಹನ್ ಬೆಂಗ್ರೆ ಮಾತನಾಡಿ, ಮೀನುಗಾರರು ಮಾರುಕಟ್ಟೆಯಲ್ಲಿ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ ಸರ್ಕಾರದ ಗಮನ ತರಬೇಕೆಂದರು.
ಇದೇ ವೇಳೆ ಮೀನುಗಾರ ಮಹಿಳೆಯರು ತಮ್ಮ ಸಮಸ್ಯೆಗಳ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರಲ್ಲಿ ತಿಳಿಸಿದರು.ಇದೇ ಸಂದರ್ಭದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರನ್ನ ವೇದಿಕೆಯಲ್ಲಿ ಅಭಿನಂದಿಸಲಾಯ್ತು. ಈ ವೇಳೆ ದ.ಕ ಜಿಲ್ಲಾ ಕಾಂಗ್ರೆಸ್ ಅಧ್ಕಕ್ಷ ಹರೀಶ್ ಕುಮಾರ್ ,ಶಾಸಕ ಯು.ಟಿ.ಖಾದರ್, ಮಾಜಿ ಸಚಿವ ರಮಾನಾಥ ರೈ,ಅಭಯ ಚಂದ್ರ ಜೈನ್ , ಮಾಜಿ ಶಾಸಕರಾದ ಜೆ.ಆರ್ .ಲೋಬೊ, ಶಕುಂತ ಳಾ ಶೆಟ್ಟಿ, ಐವನ್ ಡಿ ಸೋಜ, ಸರಳ ಕಾಂಚನ್, ಪಿ.ವಿ.ಮೋಹನ್ ,ಮಿಥುನ್ ರೈ,ವಿನಯರಾಜ್, ಮೀನುಗಾರರ ಮುಖಂಡರಾದ ನಾರಾಯಣ ಬೋಳೂರು, ಚೇತನ್ ಬೆಂಗ್ರೆ, ಗಂಗಾಧರ್, ಸುಭಾಸ್ ಕುಂದರ್ ಮೊದಲಾದವರು ಉಪಸ್ಥಿತರಿದ್ದರು.