ಮೀನುಗಾರಿಕಾ ದೋಣಿಗಳಿಗೆ ಉಪ್ಪು ನೀರು ಸಂಸ್ಕರಣಾ ಘಟಕ: ಸಚಿವ ಎಸ್. ಅಂಗಾರ

ಆಳ ಸಮುದ್ರ ಮೀನುಗಾರಿಕೆಗೆ ತೆರಳುವ ಮೀನುಗಾರರಿಗೆ ತಮ್ಮ ದೋಣಿಗಳಲ್ಲಿ ಉಪ್ಪು ನೀರನ್ನು ಸಿಹಿ ನೀರನ್ನಾಗಿ ಪರಿವರ್ತಿಸುವ ಘಟಕವನ್ನು ಅಳವಡಿಸುವುದರಿಂದ ಸಾಕಷ್ಟು ಪ್ರಯೋಜನವಾಗಲಿದೆ. ಈ ಘಟಕ ಅಳವಡಿಸಲು ಸಹಾಯಧನ ಒದಗಿಸುವ ಬಗ್ಗೆ ಸರಕಾರ ಮಟ್ಟದಲ್ಲಿ ಚರ್ಚಿಸಿ ನಿರ್ಧರಿಸಲಾಗುವುದು ಎಂದು ಮೀನುಗಾರಿಕೆ, ಬಂದರು ಹಾಗೂ ಒಳನಾಡು ಜಲಸಾರಿಗೆ ಸಚಿವ ಎಸ್. ಅಂಗಾರ ತಿಳಿಸಿದ್ದಾರೆ.

ಮಂಗಳೂರು ಹಳೆ ಬಂದರು ಧಕ್ಕೆಯ ಅಳಿವೆಬಾಗಿಲು ಬಳಿ ದೋಣಿಯೊಂದರಲ್ಲಿ ಉಪ್ಪು ನೀರನ್ನು ಸಿಹಿಯನ್ನಾಗಿಸುವ ಘಟಕದ ಪ್ರಾತ್ಯಕ್ಷಿಕೆಯನ್ನು ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು, ಮಾಧ್ಯಮ ಪ್ರತಿನಿಧಿಗಳ ಜತೆ ವೀಕ್ಷಿಸಿದ ಬಳಿಕ ಅವರು ಈ ಪ್ರತಿಕ್ರಿಯೆ ನೀಡಿದರು.ಆಸ್ಟ್ರೇಲಿಯಾ ತಂತ್ರಜ್ಞಾನ ಆಧಾರಿತ ಸಮುದ್ರದ ಉಪ್ಪು ನೀರನ್ನು ಸಿಹಿ ಮಾಡುವ ಘಟಕದ ಬಗ್ಗೆ ಪ್ರಾತ್ಯಕ್ಷಿಕೆಯನ್ನು ವೀಕ್ಷಿಸಲಾಗಿದೆ. ಈ ಘಟಕ ನಮ್ಮ ಮೀನುಗಾರರಿಗೆ ಉಪಯುಕ್ತವಾಗಲಿದೆ. ಆಳ ಸಮುದ್ರಕ್ಕೆ ಮೀನುಗಾರಿಕೆಗೆ ತೆರಳುವ (ಕನಿಷ್ಠ 4ರಿಂದ 15 ದಿನಗಳ ಕಾಲ) ಮೀನುಗಾರರಿಗೆ ಕುಡಿಯಲು, ಸ್ನಾನ ಹಾಗೂ ಇತರ ಕೆಲಸ ಕಾರ್ಯಗಳಿಗೆ ಅಗತ್ಯವಾದ ಸಿಹಿ ನೀರನ್ನು ಮೀನುಗಾರಿಕಾ ದೋಣಿಯಲ್ಲಿ ಒಯ್ಯಬೇಕಾಗುತ್ತದೆ. ಆದರೆ ಅದರ ಬದಲಾಗಿ ಈ ಘಟಕವನ್ನು ಬೋಟ್‌ಗಳಲ್ಲಿ ಅಳವಡಿಸಿದರೆ ನೀರನ್ನು ಹೊತ್ತೊಯ್ಯುವ ಪ್ರಮೇಯ ತಪ್ಪುವ ಜತೆಗೆ ಬೋಟ್ ಮೇಲಿನ ಹೊರೆ ಕಡಿಮೆಯಾಗಲಿದೆ. ಮಾತ್ರವಲ್ಲದೆ ಸಮುದ್ರದಲ್ಲಿ ಮೀನುಗಾರಿಕೆ ಸಂದರ್ಭ ಯಾವುದೇ ಸಂದರ್ಭದಲ್ಲಿ ಸಿಹಿ ನೀರಿನ ಅಗತ್ಯ ಬಂದಾಗ ಉಪ್ಪು ನೀರನ್ನು ಸಿಹಿ ನೀರನ್ನು ಪಡೆಯಬಹುದು. ಮೀನುಗಾರಿಕಾ ದೋಣಿಗಳಲ್ಲಿ ಈ ಉಪಕರಣವನ್ನು ಅಳವಡಿಸಲು ಸರಕಾರದಿಂದ ಯಾವ ರೀತಿಯಲ್ಲಿ ಸಹಾಯಧನ ನೀಡಬಹುದು ಎಂಬ ಬಗ್ಗೆ ಸರಕಾರ ಮಟ್ಟದಲ್ಲಿ ನಿರ್ಧರಿಸಲಾಗುವುದು. ಕೇಂದ್ರ ಸರಕಾರದ ಮತ್ಸ ಸಂಪದ ಯೋಜನೆಯಡಿಯೂ ಸಹಾಯಧನದ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳ ಜತೆ ಚರ್ಚಿಸಲಾಗುವುದು ಎಂದು ಅವರು ಹೇಳಿದರು.

ಈ ಸಂದರ್ಭ ಮೀನುಗಾರ ಮುಖಂಡ ರಾಮಚಂದರ್ ಬೈಕಂಪಾಡಿ,ಮೀನುಗಾರಿಕಾ ಇಲಾಖೆಯ ನಿರ್ದೇಶಕರಾದ ರಾಮಾಚಾರ್ಯ, ಮೀನುಗಾರಿಕಾ ಇಲಾಖೆಯ ಉಪ ನಿರ್ದೇಶಕ ಹರೀಶ್ ಕುಮಾರ್ ಸೇರಿದಂತೆ ಇತರ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

Related Posts

Leave a Reply

Your email address will not be published.