ಮೋದೀಜಿ ಮಂತ್ರಿ ಮಂಡಲಕ್ಕೆ ಸಣ್ಣ ಕಪ್ಪುಚುಕ್ಕೆಯೂ ಬಾರದಂತೆ ಕೆಲಸ ಮಾಡುವೆ: ಸಚಿವೆ ಶೋಭಾ ಕರಂದ್ಲಾಜೆ
ಕುಂದಾಪುರ: ಸಂಸತ್ ಅಧಿವೇಶನದಲ್ಲಿ ವಿರೋಧ ಪಕ್ಷದವರು ನೂತನ ಸಚಿವರ ಪರಿಚಯಕ್ಕೂ ಅವಕಾಶ ನೀಡದೆ ಗದ್ದಲ ಎಬ್ಬಿಸಿದ್ದರಿಂದ ನಮ್ಮನ್ನು ನಾವು ಪರಿಚಯಿಸಿಕೊಳ್ಳಲು ಜನಾಶೀರ್ವಾದ ಯಾತ್ರೆ ಆರಂಭಿಸಿದ್ದೇವೆ. ನರೇಂದ್ರ ಮೋದೀಜಿಯವರ ಸರ್ಕಾರಕ್ಕೆ ಚಿಕ್ಕ ಕಪ್ಪು ಚುಕ್ಕೆಯೂ ಬಾರದಂತೆ ಅತ್ಯಂತ ಪಾರದರ್ಶಕವಾಗಿ ಮಂತ್ರಿಯಾಗಿ ಕೆಲಸ ಮಾಡುತ್ತೇನೆ ಎಂದು ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಸಚಿವೆ ಕುಮಾರಿ ಶೋಭಾ ಕರಂದ್ಲಾಜೆ ಹೇಳಿದರು.
ಕೇಂದ್ರ ಸಚಿವೆಯಾಗಿ ಆಯ್ಕೆಗೊಂಡ ಬಳಿಕ ಗುರುವಾರ ಕುಂದಾಪುರ ಬಿಜೆಪಿ ಕಚೇರಿಗೆ ಮೊದಲ ಬಾರಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಅವರು ಕಾರ್ಯಕರ್ತರಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಕಳೆದ ಲೋಕಸಭಾ ಚುನಾವಣೆಯಲ್ಲಿ ಅತ್ಯಂತ ಹೆಚ್ಚು ಮತವನ್ನು ನನಗೆ ಕೊಟ್ಟ ಕ್ಷೇತ್ರ ಕುಂದಾಪುರ ವಿಧಾಸಭಾ ಕ್ಷೇತ್ರ. ಎರಡೂ ಬಾರಿಯೂ ಅತ್ಯಧಿಕ ಮತಗಳಿಂದ ನನ್ನನ್ನು ಇಲ್ಲಿನ ಜನ ಗೆಲ್ಲಿಸಿದ್ದಾರೆ. ಇದರ ಪರಿಣಾಮವಾಗಿ ಇಂದು ನಾನು ಕೇಂದ್ರ ಸಚಿವೆಯಾಗಿ ನಿಂತಿದ್ದೇನೆ. ಈ ಎಲ್ಲಾ ಶ್ರೇಯಸ್ಸು ನನ್ನ ಕ್ಷೇತ್ರದ ಮತದಾರರಿಗೆ ಸಲ್ಲುತ್ತದೆ. ಕೃಷಿ ಸಚಿವಾಲಯ ಅತ್ಯಂತ ಕಠಿಣ ಸಚಿವಾಲಯವಾಗಿದೆ. ದೆಹಲಿಯಲ್ಲಿ ಮೂರು ಮಸೂಧೆಗಳನ್ನಿಟ್ಟುಕೊಂಡು ಹೋರಾಟಗಳು ನಡೆಯುತ್ತಿದೆ. ಆದರೆ ಮಸೂಧೆಗಳ ವಿರುದ್ದ ಹೋರಾಟ ಮಾಡಿದ್ದರೆ ಇದಕ್ಕೆ ಉತ್ತರವನ್ನು ಹೇಳಬಹುದಾಗಿತ್ತು. ಕೃಷಿಕರ ಅಭ್ಯದಯಕ್ಕಾಗಿ ಕಳೆದ ಅರವತ್ತು ವರ್ಷಗಳಲ್ಲಿ ಬೇರೆ ಬೇರೆ ಸಮಿತಿಯವರು ವರದಿಗಳನ್ನು ಕೊಟ್ಟಿದ್ದಾರೆ. ಈ ವರದಿಯ ಆಧಾರದಲ್ಲಿ ಮೂರು ಮಸೂಧೆಗಳನ್ನು ಜಾರಿಗೊಳಿಸಲಾಗಿದೆ. ಸ್ವಾಮಿನಾಥನ್ ವರದಿಯ ಶೇಕಡಾ 95ರಷ್ಟು ಭಾಗ ಈಡೇರಿಸಿದಿದ್ದರೆ ಅದು ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಎಂದು ಹೇಳಲು ನಮಗೆ ಹೆಮ್ಮೆ ಇದೆ ಎಂದರು.
ದಲ್ಲಾಳಿಗಳು ಪ್ರತಿಭಟನೆ ಮಾಡುತ್ತಿದ್ದಾರೆ:
ಹೊಸ ಕೃಷಿ ಕಾಯ್ದೆಯಲ್ಲಿ ಎಪಿಎಂಸಿ ಮತ್ತು ರೈತರ ಅನುಕೂಲ ಸ್ಥಳದಲ್ಲಿ ಕೃಷಿ ಉತ್ಪನ್ನ ಮಾರಟಕ್ಕೆ ಅವಕಾಶವಿದ್ದರೂ ರೈತರ ಹೆಸರಲ್ಲಿ ದಲ್ಲಾಳಿಗಳು ಪ್ರತಿಭಟನೆ ಮಾಡುತ್ತಿದ್ದಾರೆ. ರೈತರ ಹಿತಕ್ಕಾಗಿ, ಮೋದಿ ಹೆಸರಿಗೆ ಕಪ್ಪುಚುಕ್ಕೆ ಬಾರದಂತೆ ಪಾರದರ್ಶಕ ಸಚಿವೆಯಾಗಿ ಕೆಲಸ ಮಾಡುತ್ತೇನೆ. ಕೃಷಿ ಕ್ಷೇತ್ರ ವಿಶಾಲವಾಗಿದ್ದು, ಅಡಕೆ, ತೆಂಗು, ಕಾಫಿ, ತೋಟಗಾರಿಕೆ, ಭತ್ತ ಕೃಷಿ ಕ್ಷೇತ್ರದಲ್ಲಿ ಸಾಕಷ್ಟು ಸಮಸ್ಯೆ ಇದ್ದು, ರೈತರ ಸ್ನೇಹಿಯಾಗಿ ಕೆಲಸ ಮಾಡುತ್ತೇನೆ. ರೈತರ ಹಾಗೂ ಕೃಷಿ ಕ್ಷೇತ್ರದ ಸಮಸ್ಯೆ ಪರಿಹಾರಕ್ಕೆ ಕಾನೂನು ಚೌಕಟ್ಟಿನಡಿ ಪರಿಹಾರ ಕಂಡುಕೊಳ್ಳುವ ಪ್ರಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಅವರು ಹೇಳಿದರು.
ಸೌದಿ ಜೈಲಿನಿಂದ ಬಿಡುಗಡೆಯಾಗಿ ಬಂದ ಹರೀಶ್ ಬಂಗೇರ ಅವರನ್ನು ಶೋಭಾ ಕರಂದ್ಲಾಜೆ ಸನ್ಮಾನಿಸಿದರು. ಕುಂದಾಪುರ ವಲಯ ಬಿಜೆಪಿ ವತಿಯಿಂದ ಸಚಿವೆ ಶೋಭಾ ಕಂದ್ಳಾಜೆ ಅವರನ್ನು ಹಿರಿಯ ಬಿಜೆಪಿ ಸದಸ್ಯ ಕಿರಣ್ ಕೊಡ್ಗಿ, ಮಂಡಲ ಅಧ್ಯಕ್ಷ ಶಂಕರ ಅಂಕದಕಟ್ಟೆ ಗೌರವಿಸಿದರು.
ಉಡುಪಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಅಧ್ಯಕ್ಷತೆ ವಹಿಸಿದ್ದರು. ದಕ ಬಿಜೆಪಿ ಉಸ್ತುವಾರಿ ಉದಯ ಕುಮಾರ್ ಶೆಟ್ಟಿ, ವಿಧಾನ ಪರಿಷತ್ ಸದಸ್ಯ ಮುನಿರಾಜು ಗೌಡ, ಜಿಲ್ಲಾ ಪ್ರಧಾನ ಕಾರ್ಯರ್ಶಿಗಳಾದ ಕುತ್ಯಾಡಿ ನವೀನ್ ಶೆಟ್ಟಿ, ಸದಾನಂದ ಉಪ್ಪಿನಕುದ್ರು, ದಕ ಸಹ ಪ್ರಭಾರಿ ರಾಜೇಶ್ ಕಾವೇರಿ, ಮಹಿಳಾ ಮೋಚಾ ಅಧ್ಯಕ್ಷೆ ವೀಣಾ ಶೆಟ್ಟಿ, ರೈತ ಮೋರ್ಚಾ ಅಧ್ಯಕ್ಷ ರಾಘವೇಂದ್ರ ಉಪ್ಪೂರು, ಯುವ ಮೋರ್ಚಾ ಅಧ್ಯಕ್ಷ ಶೀಶ ನಾಯಕ್ ಇದ್ದರು.